ನಂಜನಗೂಡು: ತನ್ನ ಕೊ‌ನೆ ಉಸಿರನ್ನ ಎಳೆಯಲು ತಾನು ಹುಟ್ಟಿ ಬೆಳೆದ ಮನೆಗೆ ಬಂದ ವೃದ್ದೆಯೊಬ್ಬರು ಬಾಗಿಲ ಬಳಿ ಆಶ್ರಯ ಪಡೆದು ಕೊನೆಗೆ ಕೊನೆಯುಸಿರೆಳೆದ ಮನಕಲಕುವ ಘಟನೆಯೊಂದು ನಂಜನಗೂಡು ತಾಲ್ಲೂಕು ರಾಂಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಟುಕ ಹೃದಯದ ಹೆತ್ತ ಮಗಳು ತಾಯಿ ಆಗಮನವನ್ನ ಸಹಿಸದೆ ಮನೆಗೆ ಬೀಗ ಜಡಿದು ಎಸ್ಕೇಪ್ ಆದ ಕಾರಣ ಬಾಗಿಲಿನಲ್ಲೇ ಉಸಿರು ಚೆಲ್ಲಿದ್ದಾರೆ. ತಾಯಿ ತನ್ನ ಮಗನ ಮನೆಗೆ ಹೋಗದೆ ತಾನು ಹುಟ್ಟಿದ ಮನೆಯೊಳಗೆ ಪ್ರವೇಶ ಸಿಗದೆ ಅತಂತ್ರ ಸ್ಥಿತಿಯಲ್ಲಿ ಬಾಗಿಲಿನ ಬಳಿ ನಿತ್ರಾಣವಾಗಿ ಮಲಗಿ ಚಿರನಿದ್ರೆಗೆ ಜಾರಿದ ವೃದ್ದೆಯ ದೃಶ್ಯ ಹೃದಯ ಕಿವುಚುವಂತಾಗಿದೆ.

ರಾಂಪುರ ಗ್ರಾಮದ ಪಾರ್ವತಮ್ಮ(96) ಮೃತ ತಾಯಿ. 8 ಜನ ಮಕ್ಕಳ ತಾಯಿ ಪಾರ್ವತಮ್ಮಳರಿಗೆ ಕೊನೆ ಆಸೆಯನ್ನ ನೆರವೇರಿಸಲು ಹೆತ್ತ ಮಗಳೇ ಸಹಕರಿಸದ ಹೃದಯ ಹೀನ ಸನ್ನಿವೇಶ ಇದಾಗಿದೆ. ಪಾರ್ವತಮ್ಮ ರವರಿಗೆ ನಾಲ್ಕು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಸಧ್ಯ ಮಗನ ಮನೆಯಲ್ಲಿ ಪಾರ್ವತಮ್ಮ ಆಶ್ರಯ ಪಡೆದಿದ್ದರು. ರಾಂಪುರ ಗ್ರಾಮದ ಮನೆ ತಲೆಮಾರುಗಳಿಂದ ಬಾಳಿದ ಮನೆ. ಪತಿ ತಿಮ್ಮೇಗೌಡ ಸಾವನ್ನಪ್ಪಿದ ಸ್ಥಳ. 96 ವರ್ಷ ಕಳೆದ ವೃದ್ದೆ ಪಾರ್ವತಮ್ಮ ತಮ್ಮ ಕೊನೆ ಆಸೆ, ಗಂಡ ತೀರಿಕೊಂಡ ಮನೆಯಲ್ಲೇ ಜೀವ ಬಿಡುವುದು.

ಆದರೆ, ಮನೆ ಪಾರ್ವತಮ್ಮ ಮಗಳು ಉಮಾ ಸುಪರ್ಧಿಯಲ್ಲಿದೆ. ಹೀಗಾಗಿ ಪತಿ ಜೀವಬಿಟ್ಟ ಜಾಗದಲ್ಲೇ ತಾನೂ ಐಕ್ಯವಾಗಬೇಕೆಂಬ ಬಯಕೆಯಿಂದ ಪಾರ್ವತಮ್ಮ ತನ್ನ ಮನೆಗೆ ಬಂದರೆ ಮಗಳು ಉಮಾ ಬಾಗಿಲಿಗೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ. ಇದೇ ಮ‌ನೆಯಲ್ಲೇ ತಾನು ಸಾಯಬೇಕೆಂದು ನಿರ್ಧರಿಸಿರುವ ಪಾರ್ವತಮ್ಮ ಬಾಗಿಲಿನಲ್ಲೇ ಆಶ್ರಯ ಪಡೆದು, ಎರಡು ದಿನಗಳಿಂದ ಮನೆ ಬಾಗಿಲ ಬಳಿ ಮಲಗಿರುವ ಪಾರ್ವತಮ್ಮರವರ ಕೊನೆ ಆಸೆ ನೆರವೇರಿಸಲು ಹೆತ್ತ ಮಗಳೇ ಸ್ಪಂದಿಸಿಲ್ಲ.

ರಾತ್ರಿ ಹಗಲು ಪಾರ್ವತಮ್ಮರನ್ನ ಉಳಿದ ಮಕ್ಕಳು ಸಮೀಪದಲ್ಲೇ ಕುಳಿತು ನೋಡಿಕೊಳ್ಳುತ್ತಿದ್ದರು. ರಾಂಪುರ ಗ್ರಾಮದ ನಿವಾಸಿಗಳು ಹಾಗೂ ಮಕ್ಕಳು ಹೇಳುವ ಪ್ರಕಾರ ಪಾರ್ವತಮ್ಮರಿಂದ ಮಗಳು ಉಮಾ ಸುಳ್ಳು ಹೇಳಿ ಆಸ್ತಿ ಕಬಳಿಸಿ ವಂಚಿಸಿದ್ದಾಳೆಂದು ಆರೋಪಿಸಿದ್ದಾರೆ.

ಆಸ್ತಿಗಾಗಿ ಜನ್ಮ ನೀಡಿದ ಮಗಳೇ ಕಲ್ಲು ಹೃದಯ ಮಾಡಿಕೊಂಡು ತಾಯಿಯ ಕೊನೆ ಆಸೆ ನೆರವೇರಿಸದೆ ದುರ್ವರ್ತನೆ ತೋರಿರುವುದು ಅಮಾನವೀಯತೆಗೆ ಕಾರಣವಾಗಿದೆ. ಬಾಗಿಲ ಬಳಿ ಹಾಸಿಗೆ ಹಿಡಿದು ಮಲಗಿದ್ದ ಪಾರ್ವತಮ್ಮ ಕೊನೆಯುಸಿರೆಳೆದ್ದಾರೆ‌. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

-ಸಿ.ಎಂ ಸುಗಂಧರಾಜು ಮೈಸೂರು.