ಮೈಸೂರು: ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಇಟ್ಟಿಗೆ ಕಾರ್ಖಾನೆಯ ಮೇಲ್ಚಾವಣಿ ಧರೆಗುರುಳಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಟ್ಟೆ ಮನಗನಹಳ್ಳಿ ಗ್ರಾಮದ ಸಿದ್ದಪ್ಪಾಜಿ ಎಂಬುವರಿಗೆ ಸೇರಿದೆ ಇಟ್ಟಿಗೆ ಕಾರ್ಖಾನೆ ಇದಾಗಿದ್ದು, ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಇಟ್ಟಿಗೆ ಗೂಡಿನ ಮೇಲ್ಚಾವಣಿ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ತಯಾರಿಸಿದ್ದ ಲಕ್ಷಾಂತರ ಮೌಲ್ಯದ ಇಟ್ಟಿಗೆಗಳು ನಾಶವಾಗಿವೆ.

ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ಹಾಗೂ ಸಂಘ ಸಂಸ್ಥೆಗಳಿಂದ ಸಾಲ ಸೋಲ ಮಾಡಿ ಕಾರ್ಖಾನೆಯನ್ನು ನಿರ್ಮಿಸಿದ್ದರು.

ಆದರೆ ಬಿರುಗಾಳಿ ಮಳೆಗೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಇಟ್ಟಿಗೆ ಗೂಡಿನ ಮಾಲೀಕ ಸಿದ್ದಪ್ಪಾಜಿ ಮನವಿ ಮಾಡಿದ್ದಾರೆ.