ಎಚ್.ಡಿ.ಕೋಟೆ: ತಾಲೂಕಿನ ತುಂಬುಸೋಗೆ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ಗ್ರಾಮದ ಅಂಕನಾಯಕ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು. ಸುಮಾರು ಮೂರು ವರ್ಷದ ಗಂಡು ಚಿರತೆ ಶುಕ್ರವಾರ ಬೆಳಗಿನ ಜಾವ ಬೋನಿಗೆ ಬಿದ್ದಿದೆ.

ಕಳೆದ ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಗುರುವಾರ ಚಿರತೆ ಕಾಡುಹಂದಿಯನ್ನು ಬೇಟೆಯಾಡಿ ಮರದ ಮೇಲೆ ಕೊಂಡೊಯ್ದು ತಿನ್ನುತ್ತಿದ್ದ ದೃಶ್ಯವನ್ನು ಗ್ರಾಮಸ್ಥರು ಗಮನಿಸಿದ್ದರು. ಇದರಿಂದ ಆತಂಕಗೊಂಡ ಗ್ರಾಮಸ್ಥರು ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ತೆರಳಲು ಕೂಡ ಭಯಪಡುವಂತಾಗಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಮರದ ಮೇಲೆ ಕಾಡುಹಂದಿಯ ಕಳೆಬರ ಪತ್ತೆಯಾಗಿತ್ತು. ಚಿರತೆಯನ್ನು ಸೆರೆಹಿಡಿಯಲು ಅದೇ ಕಳೆಬರವನ್ನು ಬೋನಿನಲ್ಲಿ ಇರಿಸಿ ಗುರುವಾರ ಸಂಜೆ ಬೋನು ಅಳವಡಿಸುವ ಜೊತೆಗೆ ಸಿಸಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿತ್ತು.

ಬೋನು ಅಳವಡಿಸಿದ ಸುಮಾರು ೧೨ ಗಂಟೆಗಳಲ್ಲೇ ಹಂದಿಯ ಮಾಂಸ ತಿನ್ನಲು ಬಂದ ಚಿರತೆ ಬೋನಿಗೆ ಸೆರೆಯಾಗಿದೆ. ಶುಕ್ರವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿರುವ ದೃಶ್ಯ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿದ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಚಿರತೆ ಸೆರೆಯಾಗಿರುವುದರಿಂದ ಕಳೆದ ಕೆಲ ದಿನಗಳಿಂದ ಆತಂಕದಲ್ಲಿದ್ದ ತುಂಬುಸೋಗೆ ಗ್ರಾಮದ ಜನರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.