ಮೈಸೂರು: ಏ.14 ರಂದು ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತೋತ್ಸವ ದಿನವೇ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಖಂಡನೀಯ. ಕೂಡಲೇ ಕಿಡಿಗೇಡಿಯನ್ನು ಬಂಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಮರಿಗೌಡನಹುಂಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ನಾಮಫಲಕಕ್ಕೆ ಚಪ್ಪಲಿ ಹಾಕಿ, ಅಪಮಾನ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ನಂಜನಗೂಡು ತಾಲ್ಲೂಕು ದಲಿತ ಸಂಘರ್ಷ ಸಮಿತಿ ನಿಯೋಗ ಮುಖಾಂತರ ಭೇಟಿ ನೀಡಿ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ದಸಂಸ ಮುಖಂಡರು, ದಲಿತ ಸಂಘರ್ಷ ಸಮಿತಿ ಮೈಸೂರು ಉಪ ವಿಭಾಗೀಯ ಸಂಚಾಲಕರಾದ ಮಂಜು ಶಂಕರಪುರ ನೇತೃತ್ವದಲ್ಲಿ ದಸಂಸದ ಪದಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಮಹೇಶ್ ಕುಮಾರ್ ಮತ್ತು ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ತಾಲ್ಲೂಕು ಸಂಘಟನಾ ಸಂಚಾಲಕ ಸುರೇಶ್ ಸಿದ್ದೇಗೌಡನಹುಂಡಿ, ಎಂ ಮಹೇಶ್ ತಗಡೂರು, ಹೊಳೆಯಪ್ಪ ಏಚಗಳ್ಳಿ, ಗಜೇಂದ್ರ ಗೋಣಹಳ್ಳಿ, ಎಂ ಮಹೇಶ್ ಗಟ್ಟವಾಡಿಪುರ, ತಾಲ್ಲೂಕು ಖಜಾಂಚಿ ಸುರೇಶ್ ದೇವರಸನಹಳ್ಳಿ, ಅರ್ಜುನ್ ಬೆಳಗುಂದ, ಹಾಗೂ ಹಿರಿಯ ಸಲಹೆಗಾರ ಸುರೇಶ್ ಬಿಳಿಗೆರೆ, ಸಿದ್ದರಾಜು ಮಲ್ಲಹಳ್ಳಿ, ಮತ್ತು ಪದಾಧಿಕಾರಿಗಳಾದ ಸಿದ್ದರಾಜು ಹೊಸವೀಡುಹುಂಡಿ, ಮಂಜು ಅಂಚಿಪುರ, ಹಾಗೂ ಮರಿಗೌಡನ ಹುಂಡಿ ಗ್ರಾಮಕ್ಕೆ ನಂಜನಗೂಡಿನಿಂದ ನಿಯೋಗ ಮುಖಾಂತರ ಭೇಟಿ ನೀಡಲಾಯಿತು.

ದಸಂಸ ಮೈಸೂರು ಉಪ ವಿಭಾಗೀಯ ಸಂಚಾಲಕ ಮಂಜು ಶಂಕರಪುರ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಅಪಮಾನಗೊಳಿಸುವ ಕೃತ್ಯಗಳು ಸಾಮಾನ್ಯವಾಗಿದ್ದು, ಎಲ್ಲಾ ಘಟನೆಗಳ ಸಂದರ್ಭದಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದರೆ, ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ.

ಮರಿಗೌಡನಹುಂಡಿ ಗ್ರಾಮದಲ್ಲಿ ಘಟನೆ ನಡೆದು ವಾರ ಕಳೆದರೂ ಆರೋಪಿಗಳನ್ನು ಪತ್ತೆಹಚ್ಚದೆ ಇರುವುದನ್ನು ನೋಡಿದರೆ, ಪೊಲೀಸ್ ಇಲಾಖೆಯ ಕಾರ್ಯವೈಕರಿ ತಿಳಿಯುತ್ತದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಮಹೇಶ್ ಕುಮಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಹಶೀಲ್ದಾರ್ ಮಹೇಶ್ ಕುಮಾರ್ ಮಾತನಾಡಿ, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಾನೂನು ರೀತ್ಯಾ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಯೋಗೇಂದ್ರ, ಆರಕ್ಷಕ ಉಪ ನಿರೀಕ್ಷಕ ಸದಾಶಿವ ತಿಪ್ಪರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ಮನು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗುಣಶೇಖರ್, ಗ್ರಾಪಂ ಪಿಡಿಒ ಪಂಚಾಯಿತಿ ಚಂದ್ರಕಾಂತ್ ಗ್ರಾಮದ ಮುಖಂಡ ರಾಜಶೇಖರ್ ಸೇರಿದಂತೆ ಹಲವರು ಹಾಜರಿದ್ದರು.