ಉಡುಪಿ: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಭಾನುವಾರ ಸಂಜೆ 5.20ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ.
ಕಟ್ಟಡದಲ್ಲಿದ್ದ ಮೊಬೈಲ್ ಶಾಪ್ ಹಾಗೂ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಅಂಗಡಿಗಳಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅವಘಡದಿಂದ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿವೆ.
ಅಗ್ನಿ ಶಾಮಕ ಇಲಾಖೆಯ ಎರಡು ಕಿ.ಮೀ ಅಂತರದಲ್ಲೇ ಅವಘಡ ಸಂಭವಿಸಿದರೂ ಅರ್ಧ ಗಂಟೆಯ ಬಳಿಕ ಘಟನೆ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆಯ ವಾಹನ ತಲುಪಿದೆ. ಅಷ್ಟೊತ್ತಿಗೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಕೂಡ ಬೆಂಕಿ ಹತೋಟಿಗೆ ಬಂದಿಲ್ಲ. ಅಗ್ನಿಶಾಮಕ ದಳದವರ ಕಾರ್ಯಾಚರಣೆ ಮುಂದುವರೆದಿದೆ.

