ನಂಜನಗೂಡು: ಗ್ರಾಮದ ರೈತರ ಜೀವನಾಧಾರವಾಗಿರುವ ಸರ್ಕಾರಿ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಲು ಮುಂದಾಗಿರುವುದನ್ನು ಖಂಡಿಸಿ ನಂಜನಗೂಡು ತಾಲೂಕಿನ ಕಾಳಿಹುಂಡಿ ಗ್ರಾಮದ ಗ್ರಾಮಸ್ಥರು ತಾಲೂಕು ಆಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಮಾತನಾಡಿ, ಹಳ್ಳಿಯ ಸಂಪನ್ಮೂಲ ಹಾಗೂ ಸರ್ಕಾರಿ ಭೂಮಿಗಳು ಆಯಾ ಗ್ರಾಮಗಳ ಅಭಿವೃದ್ಧಿಗೆ ಬಳಕೆಯಾಗಬೇಕು.
ಕಬಿನಿ ಬಲದಂಡೆ ನಾಲೆಯಿಂದಾಗಿ ಕಾಳಿಹುಂಡಿ ಗ್ರಾಮ ಸ್ಥಳಾಂತರಗೊಳ್ಳುವ ಹಿನ್ನೆಲೆಯಲ್ಲಿ ಸುಮಾರು 19 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಈ ಭೂಮಿಯನ್ನು ಗ್ರಾಮದ ಬಡವರು, ದುರ್ಬಲರು ಹಾಗೂ ವಂಚಿತರಿಗೆ ನಿವೇಶನ ನೀಡಬೇಕು. ಇದಕ್ಕೂ ಮುನ್ನ ಆಸ್ಪತ್ರೆ, ಶಾಲೆ, ಸ್ಮಶಾನ ಹಾಗೂ ಪಶುಸಂಗೋಪನೆಗೆ ಅಗತ್ಯವಾದ ಗೋಮಾಳಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಪಶುಸಂಗೋಪನೆಯೇ ಪ್ರಮುಖ ಕಸುಬಾಗಿದ್ದು, ಗೋಮಾಳದ ಅಗತ್ಯವಿದೆ. ಈಗಾಗಲೇ ನಾಲೆ ಹಾಗೂ ಇತರೆ ಯೋಜನೆಗಳಿಂದ ಸಾಕಷ್ಟು ಜಮೀನು ಕಳೆದುಕೊಂಡಿರುವ ರೈತರಿಗೆ ಮತ್ತಷ್ಟು ತೊಂದರೆ ನೀಡಬಾರದು. ಬಳಕೆಗೆ ಯೋಗ್ಯವಾದ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತೇವೆ. ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಜಮೀನನ್ನು ಗೋಮಾಳ ಸೇರಿದಂತೆ ಗ್ರಾಮಕ್ಕೆ ಅಗತ್ಯವಾದ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ ಮಾತನಾಡಿ, ಸಿಂಧುವಳ್ಳಿ ಗ್ರಾಮದ ಸರ್ವೆ ನಂಬರ್ 161/1, 166/1 ಮತ್ತು 166/2, 164/1ರಿಂದ 164/4 ಹಾಗೂ 165/1ರಿಂದ 165/6ರ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 19 ಎಕರೆಗೂ ಅಧಿಕ ಪ್ರದೇಶವಿದೆ. ಈ ಜಮೀನಿನಲ್ಲಿ ಗ್ರಾಮದ ರೈತರು ಉಳುಮೆ ಮಾಡುತ್ತಿದ್ದು, ಗೋಮಾಳ ಮತ್ತು ಸ್ಮಶಾನವಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಜಮೀನಿನಲ್ಲಿ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಯಾವುದೇ ಕಾರಣಕ್ಕೂ ಈ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಬಾರದು ಎಂದು ಆಗ್ರಹಿಸಿದರು.
ಕಾಳಿಹುಂಡಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಈ ಭೂಮಿಯನ್ನು ಬಳಸಿಕೊಳ್ಳಬೇಕು. ಆಸ್ಪತ್ರೆ, ಶಾಲೆ, ಸ್ಮಶಾನ, ಆಟದ ಮೈದಾನ, ಸಮುದಾಯ ಭವನ ಹಾಗೂ ಪಶುಸಂಗೋಪನೆಗೆ ಅಗತ್ಯವಾದ ಗೋಮಾಳಕ್ಕೆ ಆದ್ಯತೆ ನೀಡಬೇಕು. ಗ್ರಾಮಸ್ಥರ ಬದುಕಿಗೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಜಮೀನನ್ನು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಿಕೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಾಲುಮತ ಮಹಾಸಭಾ ಅಧ್ಯಕ್ಷ ಕುಮಾರಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ, ಕಾಳಿಹುಂಡಿ ಗಣೇಶ್ ಗೌಡ, ಯುವ ಮುಖಂಡರಾದ ಬಸವರಾಜು, ರವೀಶ್, ಗುಡ್ಡಪ್ಪ, ಮಾದೇಶ್, ಮಹೇಶ್, ಕುಮಾರ್, ಮಾದಪ್ಪ, ಅಭಿ, ಚಂದ್ರಪ್ಪ, ಮಸಗೆ ದೊರೆ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.

