ನಂಜನಗೂಡು: ಮುಂದಿನ ವರ್ಷದಿಂದ ಗರಳಪುರಿ ಉತ್ಸವವನ್ನು ಇನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅದ್ದೂರಿಯಾಗಿ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿರುವ ಕಲಾವಿದರನ್ನು ಗುರುತಿಸಲು ವೇದಿಕೆಯನ್ನು ಕಲ್ಪಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಂಜನಗೂಡು ನಗರದ ಗುರುಭವನದಲ್ಲಿ ಗರಳಪುರಿ ಉತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಭಾವಗೀತೆ ಸ್ಪರ್ಧೆಗೆ ಶಾಸಕ ದರ್ಶನ್ ಧ್ರುವನಾರಾಯಣ್ ಜ್ಯೋತಿ ಬೆಳಗಿಸಿ, ಹೊಂಬಾಳೆ ಹಾಕಿ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ನಂಜುಂಡೇಶ್ವರ ಸ್ವಾಮಿ ರವರ ಗೌತಮ ಪಂಚ ಮಹಾ ರಥೋತ್ಸವ ನಡೆಯುತ್ತಿರುವುದರಿಂದ ಉತ್ಸವವನ್ನು ಮಾಡಬೇಕು ಎಂಬ ಉದ್ದೇಶದಿಂದ ವಿನೂತನವಾದ ಕಾರ್ಯಕ್ರಮದಲ್ಲಿ, ಎಲ್ಲ ಜನರನ್ನು ಒಗ್ಗೂಡಿಸಿ ಒಳ್ಳೆಯ ಕಾರ್ಯಕ್ರಮವನ್ನು ನೀಡಬೇಕೆಂದು ಪ್ರಾರಂಭಿಸಿದ್ದೇವೆ.

ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಮಗೆ ಅವಕಾಶ ಸಿಕ್ಕಾಗ ನಾವು ಅವಕಾಶವನ್ನು ಕೊಡಬೇಕು. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನು ಮಾಡುತ್ತೇವೆ. ಉತ್ಸವದ ಮೊದಲನೇ ದಿನದ ಕಾರ್ಯಕ್ರಮ ಇದಾಗಿದೆ. ಭಾವಗೀತೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದೊಡ್ಡ ಜಾತ್ರಾ ಮಹೋತ್ಸವ ಅಂಗವಾಗಿ 21 ರಿಂದ 29 ವರೆಗೆ ಅದ್ದೂರಿಯಾಗಿ ನಡೆಸಲಾಗುತ್ತದೆ. ಪ್ರತಿದಿನ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚದುರಂಗ, ಯೋಗ, ಚಿತ್ರಕಲೆ ಸ್ಪರ್ಧೆ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಲ್ಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಭಾವಗೀತೆ ಸ್ಪರ್ಧೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಸ್ಥಳೀಯ ಗಾಯಕರು ಸ್ಪರ್ಧೆಯಲ್ಲಿದ್ದರು. ಇದರಲ್ಲಿ ಅತಿ ಹೆಚ್ಚಾಗಿ ಮಹಿಳೆಯರೇ ಭಾಗವಹಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಗಾಯಕರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಲತಾ ಮುದ್ದುಮೋಹನ್, ಮಾಜಿ ತಾಪಂ ಅಧ್ಯಕ್ಷ ನಾಗೇಶ್ ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ ಬಸವರಾಜು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಗಾಯಕರು ಭಾಗವಹಿಸಿದ್ದರು.