ನಂಜನಗೂಡು: ಬೇಸಿಗೆ ಆರಂಭಕ್ಕೂ ಮೊದಲೇ ಅರಣ್ಯದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಅರಣ್ಯ ಪ್ರದೇಶದ ಒಂದಷ್ಟು ಭಾಗ ಸುಟ್ಟು ಹೋಗಿದೆ. ಬೆಂಕಿಯಿಂದ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದ್ದು, ಕೃಷ್ಣರಾಜಪುರ‌ ಗ್ರಾಮದ ಹೊರವಲಯದಲ್ಲಿರುವ ಜಮೀನೊಂದರಿಂದ ಬೆಂಕಿ ಕಾಣಿಸಿಕೊಂಡಿದೆ. ಸುಳಿಗಾಳಿಗೆ ಸಿಲುಕಿ ಮೇವಿನ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿದ್ದು ಒಂದಷ್ಟು ಪ್ರದೇಶ ಬೆಂಕಿಗಾಹುತಿಯಾಗಿದೆ. ನಂತರ ಚುಂಚನಹಳ್ಳಿ ಭಾಗಕ್ಕೂ ಬೆಂಕಿ ಬಿದ್ದಿದ್ದು, ಬೆಟ್ಟದ ತುದಿಯವರೆಗೂ ವ್ಯಾಪಿಸಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಹರ ಸಾಹಸಪಟ್ಟಿದ್ದಾರೆ. ಬೆಂಕಿಗೆ ಸಿಲುಕಿರುವ ಕಾಡು ಪ್ರಾಣಿಗಳು ದಿಕ್ಕಾಪಾಲಾಗಿ ಓಡಿವೆ. ದನ-ಕರುಗಳು ಮತ್ತು ಕಾಡು ಪ್ರಾಣಿಗಳ ಆಹಾರವಾಗಿದ್ದ ಪ್ರದೇಶ ಈಗ ಸುಟ್ಟು ಕರಕಲಾಗಿದೆ. ಜಾನುವಾರುಗಳಿಗೆ ಮೇವಿಗೆ ಕೊರತೆಯಾಗುವ ಸಾಧ್ಯತೆ ಇದೆ. ಬೇಸಿಗೆ ಹಿನ್ನಲೆ ಅರಣ್ಯಕ್ಕೆ ಬೆಂಕಿ ಬೀಳದಂತೆ ಅಗತ್ಯ ಕ್ರಮ ವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.