ನಂಜನಗೂಡು: ಬೈಕ್ ಮತ್ತು ಗೊಬ್ಬರದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ಇಬ್ಬರು ದುರ್ಮರಣ ಹೊಂದಿದ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ ಗೇಟ್ ಬಳಿ ನಡೆದಿದೆ.

ಮೈಸೂರಿನ ಜೆಪಿ ನಗರದ ಚಂದ್ರು (38) ನಡುಕಲು ಮೊಳೆ ಗ್ರಾಮದ ಶೀಲಾ (35) ಮೃತ ದುರ್ದೈವಿಗಳು. ದ್ವಿಚಕ್ರ ವಾಹನದಲ್ಲಿ ಚಂದ್ರು ಮತ್ತು ಶೀಲಾ ಬೈಕ್ ನಲ್ಲಿ ಕಾರ್ಯ ಗ್ರಾಮದ ಕಡೆಯಿಂದ ಸಂತೇಮರಳ್ಳಿಗೆ ಹೋಗುತ್ತಿದ್ದು, ಚುಂಚನಹಳ್ಳಿ ಕಡೆಗೆ ಗೊಬ್ಬರದ ಲಾರಿ ಹೋಗುತ್ತಿದ್ದು, ಬೈಕ್ ಸವಾರ ಹನುಮನಪುರ ಗೇಟ್ ಬಳಿ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಬೈಕ್ ಸವಾರ ಚಂದ್ರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಶೀಲಾ ಕೆಳಗಡೆ ಬಿದ್ದ ಪರಿಣಾಮ ಇಬ್ಬರ ಮೇಲೆ ಲಾರಿ ಚಕ್ರವು ಹರಿದಿದೆ. ಇದರಿಂದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ರಘು, ಸಿಪಿಐ ಚಂದ್ರಶೇಖರ್, ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಎಸ್.ಬಿ ರಮೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿ ಮತ್ತು ಬೈಕ್ ಅನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.