ನಂಜನಗೂಡು: ನಗರದ ದೇಬೂರು ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಮಾಡದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ನಂಜನಗೂಡು–ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ಆದರ್ಶ ಪಿಯು ಕಾಲೇಜಿನ ಮುಂಭಾಗ ಬಸ್‌ಗಳು ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಹಾಗೂ ಗ್ರಾಮಗಳಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ಏಕೆ ನಿಲ್ಲಿಸುವುದಿಲ್ಲ ಎಂದು ಕೇಳಿದರೆ “ಡಿಪೋ ಮ್ಯಾನೇಜರ್‌ಗೆ ಕಂಪ್ಲೇಂಟ್ ಮಾಡಿ” ಎಂದು ಕಂಡಕ್ಟರ್‌ಗಳು ಹೇಳುತ್ತಾರೆ. ದೂರು ನೀಡಿದಾಗ ಒಂದೆರಡು ದಿನ ಬಸ್ ನಿಲ್ಲಿಸಿ, ಬಳಿಕ ಮತ್ತೆ ನಿಲುಗಡೆ ಮಾಡದೆ ಹೋಗುತ್ತಾರೆ. ಕೆಲವೊಮ್ಮೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿದರೆ ಮಾತ್ರ ಬಸ್ ನಿಲ್ಲಿಸುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನು ಬಸ್ ಹತ್ತುವ ಮುನ್ನವೇ ಚಾಲನೆ ಮಾಡುವುದು, ವಿದ್ಯಾರ್ಥಿಗಳೊಂದಿಗೆ ಕಂಡಕ್ಟರ್‌ಗಳು ಬೈದು ದುರ್ವರ್ತನೆ ತೋರುವುದು ಹಾಗೂ “ಪ್ರತಿಭಟನೆ ಮಾಡಿ, ರಸ್ತೆ ತಡೆಯಿರಿ” ಎಂದು ಹೇಳುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ಮನವಿ ಮಾಡಲಾಗಿದ್ದು, ಅವರು ಡಿಪೋ ಮ್ಯಾನೇಜರ್‌ಗೆ ಬಸ್ ನಿಲ್ಲಿಸುವಂತೆ ಸೂಚಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಶಾಸಕರ ಸೂಚನೆಗೂ ಕಿಮ್ಮತ್ತು ನೀಡದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಕಾಲೇಜಿನ ಮುಂಭಾಗದಲ್ಲಿ ಬಸ್ ನಿಲುಗಡೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.