ನಂಜನಗೂಡು: ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಬಿ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಹೆಚ್.ಬಿ. ರೇವಣ್ಣ, ಸಂಘವು ಪ್ರಸಕ್ತ ಸಾಲಿನಲ್ಲಿ ₹7.22 ಲಕ್ಷ ಲಾಭ ಗಳಿಸಿದ್ದು, ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಘದಿಂದ ರೈತರಿಗೆ ಸುಮಾರು ₹1.2 ಕೋಟಿ ಸಾಲ ವಿತರಿಸಲಾಗಿದ್ದು, ಇದರಲ್ಲಿ 38 ಮಂದಿಗೆ ಕೆಸಿಸಿ ಸಾಲ ಹಾಗೂ 18 ಮಂದಿಗೆ ಎಂ.ಟಿ. ಸಾಲ ನೀಡಲಾಗಿದೆ. ಈ ಹಿಂದೆ ಸುಮಾರು ₹4.30 ಕೋಟಿ ಸಾಲ ವಿತರಿಸಲಾಗಿತ್ತು. ಹೈನುಗಾರಿಕೆಗಾಗಿ ₹99.70ಲಕ್ಷ ಸಾಲ ನೀಡಲಾಗಿದ್ದು, ಕೆಸಿಸಿ, ಎಂ.ಟಿ., ಹೈನುಗಾರಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಒಟ್ಟಾರೆ ₹6.63 ಕೋಟಿ ಸಾಲ ನೀಡಲಾಗಿದೆ ಎಂದು ಹೇಳಿದರು.
2026-27ನೇ ಸಾಲಿನಲ್ಲಿ ಮೂರು ಎಕರೆ ಪ್ರದೇಶ ಹೊಂದಿರುವ ಆರ್ಟಿಸಿ ದಾಖಲೆ ಹೊಂದಿರುವ ರೈತರಿಗೆ ಎಂ.ಟಿ. ಸಾಲ ಪಡೆಯಲು ಅನುಕೂಲ ಮಾಡಿಕೊಡಲಾಗುವುದು. ಹೊಸ ಸಾಲ ಸೌಲಭ್ಯಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೈನುಗಾರಿಕೆಗೂ ಸಾಲ ನೀಡಲು ಈ ಬಾರಿ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ರೇವಣ್ಣ ತಿಳಿಸಿದರು.
ರೈತರು ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಘದ ಆರ್ಥಿಕ ಸ್ಥಿತಿ ಮತ್ತಷ್ಟು ಸದೃಢವಾಗಲಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ರೈತರ ಸಾಲದ ಹೊರೆ ಕಡಿಮೆಯಾಗುವಂತೆ ಸಹಕಾರ ಸಂಘದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು. ಆದ್ದರಿಂದ ರೈತರು ಸಾಲ ಮರುಪಾವತಿಗೆ ಆದ್ಯತೆ ನೀಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
2027ರಲ್ಲಿ ಸಂಘಕ್ಕೆ 50 ವರ್ಷ ಪೂರ್ಣಗೊಳ್ಳಲಿದ್ದು, ಸುವರ್ಣ ಮಹೋತ್ಸವ ಆಚರಣೆ ನಡೆಸಲು ಉದ್ದೇಶಿಸಲಾಗಿದೆ. ಐದು ದಶಕಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘದ ಸವಿ ನೆನಪಿಗಾಗಿ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಂಘದ ಬೆಳವಣಿಗೆಯಲ್ಲಿ ರೈತರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಎಲ್ಲರೂ ಸಂಘದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ರವಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ₹7.22 ಲಕ್ಷ ಲಾಭ ಗಳಿಸಿರುವುದು ಸಂತಸದ ಸಂಗತಿಯಾಗಿದೆ. ಸಂಘದ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸಲು ಸರ್ವ ಸದಸ್ಯರು ಹೆಚ್ಚಿನ ಆದ್ಯತೆ ನೀಡಬೇಕು. ರೈತರು ಸಂಘದ ವಿವಿಧ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸಬೇಕು ಎಂದು ಹೇಳಿದರು.
ಸಂಘದ ವ್ಯವಹಾರಗಳನ್ನು ಪಾರದರ್ಶಕವಾಗಿ ನಡೆಸುವುದರ ಜೊತೆಗೆ ಸದಸ್ಯರಿಗೆ ಅಗತ್ಯವಿರುವ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಲಾಭವು ಹೆಚ್ಚಿದಂತೆ ಮುಂದಿನ ದಿನಗಳಲ್ಲಿ ಸದಸ್ಯರು ಹಾಗೂ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ದಾಖಲಿಸಿ, ಹಿಂದಿನ ಸರ್ವ ಸದಸ್ಯರ ಸಭೆಯ ನಡವಳಿಯನ್ನು ಓದಿ ಅಂಗೀಕರಿಸಲಾಯಿತು. 2025-26ನೇ ಸಾಲಿನ ಆಡಿಟ್ ಆಗಿರುವ ಜಮಾ-ಖರ್ಚು, ಲಾಭ-ನಷ್ಟ ಹಾಗೂ ಆಸ್ತಿ-ಜವಾಬ್ದಾರಿ ತಃಖ್ತೆಗಳನ್ನು ಓದಿ ಪರಿಶೀಲಿಸಿ ಅಂಗೀಕರಿಸಲಾಯಿತು. 2026-27ನೇ ಸಾಲಿಗೆ ಲೆಕ್ಕಪರಿಶೋಧನೆ ನಡೆಸಲು ಲೆಕ್ಕಪರಿಶೋಧಕರ ನೇಮಕದ ಕುರಿತು ಚರ್ಚೆ ನಡೆಸಲಾಯಿತು. ಇದೇ ವೇಳೆ 2026-27ನೇ ಸಾಲಿನ ಅಂದಾಜು ಬಜೆಟ್ಗೆ ಮಂಜೂರು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಪದ್ಮ, ನಿರ್ದೇಶಕರಾದ ಹೆಚ್.ಎಂ. ಮನೋಜ್, ಎಂ.ಡಿ. ಅಶೋಕ್ ಕುಮಾರ್, ಹೆಚ್.ಪಿ. ಕುಮಾರ್, ಹೆಚ್.ಎಂ. ಮಲ್ಲೇಶ್, ನಂಜುಂಡಸ್ವಾಮಿ, ಹೆಚ್.ಜಿ. ಗೋವಿಂದರಾಜು, ಎಸ್. ಸೋಮಶೇಖರ್, ಮಹೇಶ್, ಪುಟ್ಟಮಾದಮ್ಮ, ಹೆಚ್.ಬಿ. ಲೋಕೇಶ್, ಮೇಲ್ವಿಚಾರಕ ದಿಲೀಪ್ ಕುಮಾರ್, ಕಂಪ್ಯೂಟರ್ ಆಪರೇಟರ್ ಹೆಚ್.ಎಸ್. ಅರ್ಪಿತಾ, ಮಾರಾಟ ಗುಮಾಸ್ತ ಆನಂದ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

