ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೆ.ಆರ್.ಪೇಟೆ ಮೂಲದ ಡಾ. ಶ್ರೀನಿಧಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿರುವ ಚನ್ನರಾಯಪಟ್ಟಣ ರಸ್ತೆಯ ಖಾಸಗಿ ಹೋಟೆಲ್ನ ಸಭಾಂಗಣದಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನೆರವೇರಿತು. ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಹಿತೈಷಿಗಳು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.
ಡಾ. ಶ್ರೀನಿಧಿ ಅವರು ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದ ಸಮೀಪ ಕ್ಲಿನಿಕ್ ನಡೆಸುತ್ತಿರುವ ಡಾ. ಆರ್. ರಾಜೇಶ್ವರಿ ಮತ್ತು ರವಿಕುಮಾರ್ ಅವರ ಪುತ್ರಿ. ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥ ನೆರವೇರಿದೆ.
ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನಿಶ್ಚಿತಾರ್ಥದ ಫೋಟೋಗಳು ಮತ್ತು ವಿಡಿಯೋಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಿಶ್ಚಿತಾರ್ಥದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇನ್ನೊಂದೆಡೆ, ತಂದೆ ಧ್ರುವನಾರಾಯಣ್ ಹಾಗೂ ತಾಯಿ ವೀಣಾ ಅವರನ್ನು ಕಳೆದುಕೊಂಡಿರುವ ದರ್ಶನ್ ಅವರ ನಿಶ್ಚಿತಾರ್ಥದ ಸಂದರ್ಭದಲ್ಲಿ, ಅವರ ತಂದೆ-ತಾಯಿ ಸಮಾರಂಭದಲ್ಲಿ ಉಪಸ್ಥಿತರಿರುವಂತೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಫೋಟೋಗಳು ಮತ್ತು ವಿಡಿಯೋಗಳನ್ನು ರಚಿಸಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ದರ್ಶನ್ ಅವರ ಕುಟುಂಬದ ಮೇಲಿನ ಪ್ರೀತಿ ಮತ್ತು ಭಾವನಾತ್ಮಕ ಒಡನಾಟವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

