ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಜೆಸಿಬಿ ಘರ್ಜಿಸಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಾಗ ಒತ್ತುವರಿದಾರರಿಂದ ವಶಕ್ಕೆ ಪಡೆದಿದೆ. ಮೈಸೂರು ಊಟಿ ರಸ್ತೆಯ ಶಕ್ತಿಧಾಮ ಮುಂಭಾಗ ಸುಮಾರು 38 ಗುಂಟೆ ಜಾಗವನ್ನ ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಪಾರ್ಕಿಂಗ್ ಹಾಗೂ ಟೀ ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದರು.

2011 ರಲ್ಲಿ ಸದರಿ ಜಾಗವನ್ನ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗದ ಡಿ.ದೇವರಾಜ ಅರಸು ವಿದ್ಯಾರ್ಥಿ ವಿದ್ಯಾರ್ಥಿನಿಯರ ನಿಲಯ ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು. ಆದ್ರೆ ಸದರಿ ಜಾಗವನ್ನ ಸುಮಾರು 25 ವರ್ಷಗಳಿಂದ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅನುಭವಿಸುತ್ತಿದ್ದರು. ದಾಖಲೆಗಳನ್ನ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಒತ್ತುವರಿ ತೆರುವಿಗೆ ಆದೇಶಿಸಿದ್ದಾರೆ.

ತಹಸೀಲ್ದಾರ್ ಮಹೇಶ್ ಕುಮಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ, ವಿದ್ಯಾರಣ್ಯಪುರಂ ಠಾಣೆ ನಿರೀಕ್ಷಕರಾದ ಯೋಗಾಂಜನಪ್ಪ, ಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ರವಿಕುಮಾರ್ ರವರ ಸಮ್ಮುಖದಲ್ಲಿ ಒತ್ತುವರಿ ತೆರುವುಗೊಳಿಸಿದ್ದಾರೆ. ಕೋಟ್ಯಾಂತರ ಮೌಲ್ಯದ ಜಾಗವನ್ನ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಹಸ್ತಾಂತರಿಸಲಿದ್ದಾರೆ.