ಉಡುಪಿ: ಕರಾವಳಿಯ ಜನಪದ ಕ್ರೀಡೆ ಕಂಬಳ. ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಾರಂಪರಿಕ ಕಂಬಳಗಳು ಭಕ್ತಿ ಭಾವದಿಂದ ನಡೆಯುತ್ತಿವೆ. ಉಡುಪಿಯ ಕಟಪಾಡಿಯಲ್ಲಿ ರಾಜ ಮನೆತನದ ಸಂಪ್ರದಾಯಿಕ ಕಂಬಳ ನಡೆಯಿತು. ಇಂತಹ ನೂರಾರು ದೈವಕಂಬಳ ಉಡುಪಿ ಜಿಲ್ಲೆಯಲ್ಲಿ ಭಯ ಭಕ್ತಿಯಿಂದ ನಡೆಯುತ್ತದೆ.
ಶತಮಾನಗಳ ಇತಿಹಾಸವಿರುವ ಉಡುಪಿ ಜಿಲ್ಲೆಯ ಕಟಪಾಡಿ ಕಂಬಳ ಕಂಬಳ ಸಮಿತಿಯ ಅಡಿಯಲ್ಲಿ ನಡೆದರೆ ಈ ಬಾರಿ ಮಾತ್ರ ಸರಳವಾಗಿ ಸಂಪ್ರದಾಯ ಬದ್ಧವಾಗಿ ನಡೆಯಿತು.ಪ್ರತಿ ವರ್ಷ ದಂತೆ ಹಲವು ಕೋಣದ ಮಾಲೀಕರು ಕಟಪಾಡಿ ಕಂಬಳದಲ್ಲಿ ಕೋಣ ಓಡಿಸಿದರು. ಕಟಪಾಡಿ ಎಂಬ ಪ್ರದೇಶ ತುಳು ನಾಡಿನ ಇತಿಹಾಸದಲ್ಲಿ ಜಾನಪದ ಕತೆಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಕೋಟಿ ಚೆನ್ನಯ ಕಾಂತಾಬಾರೆ ಬೂದಬಾರೆ, ಬಬ್ಬುಸ್ವಾಮಿ ಮುಂತಾದ ದೈವಂಶ ಸಂಭೂತರ ಕತೆಗಳಲ್ಲಿ ಕಟಪಾಡಿ ಬೀಡು ಒಂದಲ್ಲ ಒಂದು ಕಾರಣದಿಂದ ಉಲ್ಲೇಖಗೊಂಡಿದೆ. ಕಟಪಾಡಿ ಬೀಡುವಿನಲ್ಲಿ ಮಂಜೋಟಿ ಜೂಮಾಧಿ ದೈವದ ನೇಮ ನಡೆದು ಕಂಬಳದ ಕರೆಗೆ ದೈವ ಪ್ರದಕ್ಷಿಣೆ ಹಾಕಿದ ನಂತರವೇ ಕಂಬಳ ಆರಂಭವಾಗುತ್ತದೆ.
ಕಂಬಳ ಅಂದರೆ ಕೇವಲ ಸ್ಪರ್ಧೆಯಲ್ಲ, ಇಲ್ಲಿ ದೈವದ ಆರಾಧನೆಗೂ ಸ್ಥಾನವಿದೆ. ಎರು ಬಂಟ ಎಂಬ ದೈವದ ಪಾತ್ರಿಯು, ಕಂಬಳ ನಡೆಯುವ ಗದ್ದೆಗೆ ಪ್ರದಕ್ಷಿಣೆ ಬಂದು, ನರ್ತನ ಸೇವೆ ನಡೆಸುತ್ತಾನೆ. ಆ ದೈವದ ರಕ್ಷಣೆಯಲ್ಲೇ ಕೋಣಗಳು ಗದ್ದೆಗಿಳಿಯುವುದು ಸಂಪ್ರದಾಯ. 1913 ನೇ ಇಸವಿಯಿಂದ ಒಂದು ಬಾರಿಯೂ ಅಡ್ಡಿಯಾಗದಂತೆ ಪ್ರತೀ ವರ್ಷ ಕಂಬಳ ನಡೆಸಿಕೊಂಡು ಬರಲಾಗುತ್ತಿದೆ.
106 ವರ್ಷಗಳ ಇತಿಹಾಸದಲ್ಲಿ ದೈವಗಳಿಗೆ ಕೋಣಗಳ ಈ ಸೇವೆ ತಪ್ಪಿದ್ದಿಲ್ಲ.ಸ್ಪರ್ಧೆಗಿಂತಲೂ ಆರಾಧನೆಗೆ ಒತ್ತು ಕೊಟ್ಟು ಈ ಬಾರಿ ಕಂಬಳ ನಡೆಸಿರುವುದುವಿಶೇಷ. ಮೂಲ ಸ್ವರೂಪದ ಈ ದೈವ ಕಂಬಳ ಕಾಣಲು ಊರು ಮಾತ್ರವಲ್ಲ ಪರವೂರುಗಳ ಸಾವಿರಾರು ಜನರು ಭಾಗಿಯಾದರು.

