ನಂಜನಗೂಡು: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳ ಮೀಸಲಾತಿ ವರದಿಯ ಸಮಸ್ಯೆಯೂ ಪೂರ್ಣವಾಗಿ ಬಗೆಹರಿವ ತನಕ ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳ ಮೀಸಲಾತಿಯ ಕಾರ್ಯ ಚಟುವಟಿಕೆಗಳನ್ನು ಶೀಘ್ರವೇ ತಡೆಯಾಜ್ಞೆ ನೀಡಬೇಕು ಎಂದು ಆಗ್ರಹಿಸಿ ನಂಜನಗೂಡಿನಲ್ಲಿ ಜನಸಂಗ್ರಾಮ ಪರಿಷತ್ ನಿಂದ ಮನವಿ ಸಲ್ಲಿಸಲಾಯಿತು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜನ ಸಂಗ್ರಾಮ ಪರಿಷತ್, ಛಲವಾದಿ ಮಹಾಸಭಾ ಮತ್ತು ದಲಿತ ಸಂಘರ್ಷ ಸಮಿತಿ ವತಿಯಿಂದ ಜಮಾಯಿಸಿದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಡಾ.ಸ್ಮಿತಾ ರಾಮು ರವರಿಗೆ ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್ ಮನವಿ ಸಲ್ಲಿಸಿ ಮಾತನಾಡಿದರು.
ಒಳ ಮೀಸಲಾತಿಯಿಂದ ಶಿಕ್ಷಣ ಮತ್ತು ಉದ್ಯೋಗಕ್ಕೆ ತುಂಬಾ ತೊಂದರೆಯಾಗುತ್ತದೆ. ಹೊಸ ಜಾತಿ ಪ್ರಮಾಣ ಪತ್ರವನ್ನು ವಿತರಣೆ ಮಾಡುತ್ತಿರುವುದನ್ನು ತುರ್ತಾಗಿ ನಿಲ್ಲಿಸಬೇಕು. ಹಾಗೂ ಹಳೆ ಜಾತಿ ಪ್ರಮಾಣ ಪತ್ರವನ್ನೇ ಮುಂದುವರಿಸಬೇಕು. ಒಳ ಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುವನ್ನು ಪರಿಷ್ಕರಣೆ ಮಾಡಬೇಕು. ಈ ಗೊಂದಲಗಳು ಪರಿಹಾರವಾಗುವ ತನಕ ಹಳೆ ಮೀಸಲಾತಿಯನ್ನೇ ಅನ್ವಯಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಒಳ ಮೀಸಲಾತಿ ಮಸೂದೆಯು ಪೂರ್ಣವಾಗಿ ಜಾರಿಯಾಗದ ಕಾರಣ ಹೊಸ ಜಾತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಿ, ಆದೇಶ ಮಾಡಬೇಕು. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಆದೇಶವಾಗಿರುವ ಹಿನ್ನೆಲೆಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಇತರೆ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದು ಹಳೆ ಜಾತಿ ಪ್ರಮಾಣ ಪತ್ರವನ್ನು ಮಾನ್ಯ ಮಾಡುವಂತೆ ಶಿಕ್ಷಣ ಮತ್ತು ಔದ್ಯೋಗಿಕ ಇಲಾಖೆಗಳಿಗೆ ತುರ್ತಾಗಿ ಆದೇಶ ಹೊರಡಿಸಬೇಕು.
ಡಾ.ಎಚ್.ಎನ್ ನಾಗಮೋಹನ್ ದಾಸ್ ವರದಿಯು ಪೂರ್ಣವಾಗಿ ಜಾರಿಗೊಳ್ಳುವ ಮೊದಲೇ ವರದಿಯನ್ನು ಅನ್ವಯಿಸಿ ನೀಡಿರುವ ಕೆಸೆಟ್ ಫಲಿತಾಂಶ ಮತ್ತು ವಿತರಿಸಿರುವ ಪ್ರಮಾಣ ಪತ್ರವನ್ನು ಅಮಾನ್ಯಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಹಾಗೂ ಮರು ಫಲಿತಾಂಶ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಅನ್ವಯಿಸಿ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹೊರಡಿಸಿರುವ ಈ ಆದೇಶಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಅಭಿನಾಗಭೂಷಣ್, ದಸಂಸ ವಿಭಾಗೀಯ ಸಂಚಾಲಕ ಮಂಜು ಶಂಕರಪುರ, ಸರಗೂರು ಮರಿಸ್ವಾಮಿ, ಕೋಣನೂರು ಚೇತನ್, ದಯಾನಂದ, ಮಹದೇವಸ್ವಾಮಿ, ತಗಡೂರು ಮಹೇಶ್, ಆಲತ್ತೂರು ಶಿವರಾಜು, ಡಿಸಿ ಸುರೇಶ್, ಕೃಷ್ಣಮೂರ್ತಿ, ಕವಲಂದೆ ರಾಹುಲ್, ಗಟ್ಟವಾಡಿ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

