ಗುಂಡ್ಲುಪೇಟೆ : ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಸಿದ್ದರಾಮಯ್ಯ ಭಾಜನರಾದ ಹಿನ್ನೆಲೆ ಅಹಿಂದಾ ಸಂಘಟನೆ, ಯುವಕರು, ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಸಂಭ್ರಮಿಸಿ ಸಿಹಿ ಹಂಚಿ ಬಿರಿಯಾನಿ ವಿತರಣೆ ಮಾಡಿದರು.

ಪಟ್ಟಣದ ಸುರಭಿ ವೃತ್ತದಿಂದ ಊಟಿ ವೃತ್ತ ಸೇರಿದಂತೆ ವಿವಿದೆಡೆ ಫೋಟೋ ಕಟೌಟ್ ಗಳು ರಾರಾಜಿಸಿದವು, ಯುವಕ ಮಿತ್ರರು ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಶುಭಕೋರಿ ಕಟೌಟ್ ಗಳನ್ನ ಅಳವಡಿಸಿದ್ದರು. ರಾಜಕಾರಣದ ಜಟ್ಟಿ ಕಾಳಗದ ನೈಪುಣ್ಯತೆ ಪ್ರವೀಣರಾದ ಸಿದ್ದರಾಮಯ್ಯ ಅವರಿಗೆ ಪ್ರಿಯವಾದ ನಾಟಿಕೋಳಿ ಬಿರಿಯಾನಿ ವ್ಯವಸ್ಥೆ ಮಾಡುವ ಜೊತೆಗೆ ಅಭಿಮಾನ ತೋರಿದರು.
ಈ ವೇಳೆ ಮಾತನಾಡಿದ ತಾಲೂಕು ಕುರುಬ ಸಂಘದ ಅಧ್ಯಕ್ಷ ಜಿ.ಎಲ್.ರಾಜು ಬಡಕುಟುಂಬದಿಂದ ಬಂದಂತ ಸಿದ್ದರಾಮಯ್ಯ ಅವರು ದೇವರಾಜು ಅರಸು ಅವರ ದಾಖಲೆ ಮುರಿದಿದ್ದಾರೆ, ಬಡವರ ಪಾಲಿನ ಭಾಗ್ಯಗಳ ಸರದಾರನಾಗಿ ಅನ್ನರಾಮಯ್ಯನಾಗಿ ತುತ್ತು ನೀಡಿದ ಮೇರು ವ್ಯಕ್ತಿತ್ವ ನಾಯಕರಾಗಿದ್ದಾರೆ, ಮುಂದಿನ ದಿನಗಳಲ್ಲಿಯೂ ಸಹ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಬೇಕು ಎಂದರು.
2 ಸಾವಿರ ಮಂದಿಗೆ ಬಿರಿಯಾನಿ : ಮುಂಜಾನೆಯಿಂದಲೇ ಸಂಭ್ರಮಾಚರಣೆಗೆ ಸಿದ್ಧತೆ ನಡೆಸುವ ಜೊತೆಯಲ್ಲೇ 2 ಸಾವಿರ ಮಂದಿಗೆ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಕನಕವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಸಿದ್ದರಾಮಯ್ಯ ಅವರ ಪರ ಜಯಘೋಷ ಮೊಳಗಿಸುವ ಮೂಲಕ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

