ನಂಜನಗೂಡು: ನಗರದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಪರ್ಸ್ ನ್ನು ನಗರದ ಉದ್ಯಮಿಯೊಬ್ಬರು ವಾಪಸ್ಸು ನೀಡಿ ಮಾನವೀಯತೆ ಮೆರೆದಿರುವುದು ನಗರದಲ್ಲಿ ಮಂಗಳವಾರ ಕಂಡು ಬಂದಿದೆ.

ನಗರದ ಖಾಸಗಿ ಕಲ್ಯಾಣ ಮಂಟಪದ ಸಂಬಂಧಿಕರ ಮದುವೆಗೆ ಆಗಮಿಸಿದ್ದ ಹೆಚ್.ಡಿ ಕೋಟೆಯ ಇಂದಿರಾನಗರದ ನಿವಾಸಿ ಮಹದೇವಮ್ಮ ಎಂಬ ಮಹಿಳೆ ಬಸ್ ಹತ್ತುವಾಗ ತನ್ನ ಕರ್ಚೀಪಿನಲ್ಲಿ ಸುತ್ತಿಕೊಂಡಿದ್ದ ಪರ್ಸ್ ಬಿಟ್ಟು ಬಸ್ ಏರಿ ಊರಿಗೆ ಹೊರಟು ಹೋಗಿದ್ರು. ಇದೇ ಮದುವೆಗೆ ಆಗಮಿಸಿದ್ದ ನಗರದ ಕಾಮಧೇನು ಎಂಟರ್ಪ್ರೈಸಸ್ನ ಉದ್ಯಮಿ ಚಿನ್ನಪ್ಪ ರವರು ಪರ್ಸ್ ಬಿದ್ದಿರುವುದನ್ನು ಗಮನಿಸಿ ಅದನ್ನು ತೆಗೆದುಕೊಂಡು ನೋಡಿದಾಗ ಅದರಲ್ಲಿ ಚಿನ್ನದ ಮಾಂಗಲ್ಯ ಸರ ಹಾಗೂ ಸ್ವಲ್ಪ ಪ್ರಮಾಣದ ಹಣ ಇತ್ತು.

ಜತೆಗೆ ಕೆಲವು ರಶೀತಿಗಳು, ವಿಳಾಸ ಇತ್ತು. ತಕ್ಷಣವೇ ಚಿನ್ನಪ್ಪ ದೂರವಾಣಿ ಮೂಲಕ ಸಂಪರ್ಕಿಸಿದಾಗ ಪರ್ಸ್ ಕಳೆದುಕೊಂಡಿದ್ದ ಮಹದೇವಮ್ಮನ ಮಗ ಬಂದು ಅದನ್ನು ವಾಪಸ್ಸು ಪಡೆದಿದ್ದಾರೆ. ಪರ್ಸನಲ್ಲಿ ಬೆಳೆಬಾಳುವ ಚಿನ್ನದ ಮಾಂಗಲ್ಯ ಸರ ಸೇರಿದಂತೆ ಹಲವು ದಾಖಲಾತಿಗಳು ಇದ್ದವು. ಪ್ರಾಮಾಣಿಕವಾಗಿ ಕಳೆದು ಹೋಗಿದ್ದ ಪರ್ಸ್ ಹಿಂತಿರುಗಿಸಿದ ಚಿನ್ನಪ್ಪನವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.