ನಂಜನಗೂಡು: ಟಿ. ನರಸೀಪುರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಲಿ ಶಾಲು ಹಾಗೂ ಡಿಎಸ್ಎಸ್ ಸಂಘಟನೆ ಕುರಿತು ನೀಡಿರುವ ಹೇಳಿಕೆಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜಕಾರಣ ಬಂದಾಗ ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಒಂದು ಸಂಘಟನೆ ಕುರಿತು ಈ ರೀತಿಯಾಗಿ ಮಾತನಾಡುವುದು ಹೀನಾಯ ಕೃತ್ಯ ಎಂದು ಭಾಗ್ಯರಾಜ್ ಆರೋಪಿಸಿದರು. ಸಂಘಟನೆಗಳ ಪ್ರಮುಖರು ಅಧಿಕಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಎಲ್ಲೆಯನ್ನು ಮೀರಿ ವರ್ತಿಸುವುದಕ್ಕೆ ಕಡಿವಾಣ ಹಾಕಬೇಕು.

ಇಂತಹ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜಕೀಯ ತೀವ್ರತೆಗೆ ಕಾರಣವಾಗುವ ಸಾಧ್ಯತೆಯಿದ್ದು, ಸ್ಥಳೀಯ ಶಾಸಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿತ್ತು. ಶಾಸಕರ ನಿರ್ಲಕ್ಷ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯವನ್ನು ರಾಜಕೀಯವಾಗಿ ಬಳಸಿಕೊಂಡು ಪ್ರತಾಪ್ ಸಿಂಹ ಅವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಸವಾಲು ಹಾಕಿದ ಭಾಗ್ಯರಾಜ್, ಕೇಂದ್ರ ಸರ್ಕಾರದಿಂದ ಬರ ಪರಿಹಾರವನ್ನು ರಾಜ್ಯಕ್ಕೆ ತರಿಸಲು ಹೋರಾಟ ನಡೆಸಲಿ.

ರೈತರ ಕೆರೆ-ಕಟ್ಟೆಗಳಿಗೆ, ನಾಲೆಗಳಿಗೆ ನೀರು ದೊರೆಯದಿರುವ ಸಮಸ್ಯೆ ಕುರಿತು ನಮ್ಮೊಂದಿಗೆ ಹೋರಾಟ ಮಾಡಲಿ. ಅದನ್ನು ಬಿಟ್ಟು ಗಣಪತಿ, ಬಟ್ಟೆ ಹಾಗೂ ಊಟದ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವುದರಿಂದ ಸಮಾಜಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಸಮಾಜದ ಸ್ವಾಸ್ಥ್ಯ ಕಾಪಾಡಲು ಇಂತಹ ವಿಚಾರಗಳಿಗೆ ರಾಜಕೀಯ ಬಣ್ಣ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.