ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯಲ್ಲಿ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದ್ದು, ಪ್ರವಾಸಿಗರು ಸಂತಸಗೊಂಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡಿದೆ. ಸಫಾರಿ ರಸ್ತೆಯ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಹಾಯಾಗಿ ಮಲಗಿದ್ದ ಹುಲಿ, ಬಳಿಕ ಅದೇ ನೀರನ್ನು ಕುಡಿಯುತ್ತಾ ಪ್ರವಾಸಿಗರ ಕ್ಯಾಮೆರಾಗಳಿಗೆ ಪೋಸ್ ನೀಡಿದೆ.

ಹುಲಿಯನ್ನು ಸಮೀಪದಿಂದ ಕಣ್ತುಂಬಿಕೊಂಡ ಪ್ರವಾಸಿಗರು ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಹುಲಿಯ ವಿಶಿಷ್ಟ ಚಲನವಲನಗಳ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವನ್ಯಜೀವಿ ಪ್ರಿಯರ ಗಮನ ಸೆಳೆಯುತ್ತಿವೆ.