ನಂಜನಗೂಡು: ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಪತಿ ಗಾಯಗೊಂಡ ಘಟನೆ ನಂಜನಗೂಡಿನ ಫ್ಲೈ ಓವರ್ ಬಳಿ ನಡೆದಿದೆ.
ನಂಜನಗೂಡು ನಗರದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಂಪತಿ ಮೈಸೂರಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಗೆಜ್ಜಗನಹಳ್ಳಿ ಗ್ರಾಮದ ರಾಣಿ ಸ್ಥಳದಲ್ಲೇ ಮೃತಪಟ್ಟರೆ ಪತಿ ನಾಗೇಂದ್ರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಚಾಮುಂಡಿ ಟೌನ್ ಶಿಪ್ ಬಳಿ ನಿರ್ಮಾಣವಾಗಿರುವ ನೂತನ ಪ್ಲೈ ಓವರ್ ಬಳಿ KL.29,Q 4240 ಕೇರಳ ಮೂಲದ ಲಾರಿ ವೇಗವಾಗಿ ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂಜನಗೂಡು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪಘಾತಕ್ಕೆ ಕಾರಣವಾದ ಕೇರಳ ಮೂಲದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

