ಮಂಗಳೂರು : ಮೆಸ್ಕಾಂನ ಸರ್ವರ್ ಹಾಗೂ N-SOIT ನ ತೀವ್ರ ಸಮಸ್ಯೆಯಿಂದಾಗಿ ಹೊಸದಾಗಿ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರು, ಜನಸಾಮಾನ್ಯರು ಹಾಗೂ ವಿದ್ಯುತ್ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದು, ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ದ.ಕ. ಜಿಲ್ಲಾ ಸಮಿತಿ, CITU, DYFL ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವಾರು ಜನಪರ ಸಂಘಟನೆಗಳು ಮೆಸ್ಕಾಂ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ದ.ಕ. ಜಿಲ್ಲೆಯ ಜನತೆ ಕಷ್ಟಪಟ್ಟು ಹೊಸ ಮನೆಯನ್ನು ನಿರ್ಮಿಸಿದ್ದು, ಇನ್ನೇನು ಆ ಮನೆಯಲ್ಲಿ ವಾಸಿಸಲು ಗೃಹಪ್ರವೇಶಕ್ಕೆ ದಿನಾಂಕ ನಿಗದಿಪಡಿಸಬೇಕಾದರೆ, ಆ ಹೊಸ ಮನೆಗೆ ವಿದ್ಯುತ್ ಸಂಪರ್ಕ ಇನ್ನೂ ಸಿಗುತ್ತಿಲ್ಲ. ಹೀಗೆ ಸಾವಿರಾರು ಹೊಸ ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಕಷ್ಟಪಡುತ್ತಿದೆ. ಜೊತೆಗೆ ಗ್ರಾಹಕರು ಮಾನಸಿಕವಾಗಿ ನೊಂದಿದ್ದಾರೆ. ಈ ಹೊಸ ಮನೆಗಳ ವಿದ್ಯುತ್ ಜೋಡಣೆಗೆ ಸಂಬಂಧಿಸಿ ಸಂಪೂರ್ಣ ಕೆಲಸಗಳನ್ನು ವಿದ್ಯುತ್ ಗುತ್ತಿಗೆದಾರರು ತಮ್ಮ ಕೈಯಿಂದಲೇ ಹಣ ಹಾಕಿ ಕೆಲಸಗಳನ್ನು ಪೂರ್ಣಗೊಳಿಸಿರುತ್ತಾರೆ.
ಆದರೆ ವಿದ್ಯುತ್ ಸಂಪರ್ಕ ಆಗದೆ ಗ್ರಾಹಕರು ವಿದ್ಯುತ್ ಗುತ್ತಿಗೆದಾರರಿಗೆ ನೀಡಬೇಕಾದ ಹಣವನ್ನು ತಡೆಹಿಡಿದಿರುತ್ತಾರೆ. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿರುವ ಗುತ್ತಿಗೆದಾರರಲ್ಲಿ ಲಕ್ಷಾಂತರ ರೂ.ಗಳ ಬಾಕಿಯಿಂದಾಗಿ ಪ್ರತಿಯೊಬ್ಬರ ಬದುಕು ತೀವ್ರ ಸಂಕಷ್ಟದಲ್ಲಿದೆ. ಒಟ್ಟಿನಲ್ಲಿ ಮೆಸ್ಕಾಂ ಇಲಾಖೆಯ ಅವ್ಯವಸ್ಥೆ ಹಾಗೂ ಬೇಜವಾಬ್ದಾರಿತನದಿಂದಾಗಿ ಗ್ರಾಹಕರು ಜನಸಾಮಾನ್ಯರು, ವಿದ್ಯುತ್ ಗುತ್ತಿಗೆದಾರರು ತೀವ್ರವಾದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಈ ಬಗ್ಗೆ ವಿದ್ಯುತ್ ಗುತ್ತಿಗೆದಾರರ ಸಂಘದ ಮುಖಂಡರು ಹಲವಾರು ಬಾರಿ ಮೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿ ತಮ್ಮ ಅಹವಾಲನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ದ.ಶ. ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು ರೈತ ಕಾರ್ಮಿಕರು, ವಿದ್ಯಾರ್ಥಿ ಯುವಜನರು ಮಹಿಳೆಯರು ದಲಿತ ಅದಿವಾಸಿ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಶಕ್ತಿಗಳ ಜೊತೆಗೂಡಿ ಮೆಸ್ಕಾಂ ಕಚೇರಿ ಚಲೋದಂತಹ ಬೃಹತ್ ಹೋರಾಟವನ್ನು ಸಂಘಟಿಸಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ.

