ಮೈಸೂರು: ಹಲವು ವರ್ಷಗಳ ಸುಂದರ ದಾಂಪತ್ಯ ಜೀವ ದುರಂತದಲ್ಲಿ ಅಂತ್ಯಗೊಂಡಿದೆ. ಗ್ರಾಮಕ್ಕೇ ಮಾದರಿಯಾಗಿದ್ದ ವೃದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಪತ್ನಿಗೂ ವಿಷ ನೀಡಿದ್ರೆ ಎಂಬ ಕುತೂಹಲ ಪ್ರಶ್ನೆ ಉದ್ಭವಿಸಿದೆ. ಒಟ್ಟಾರೆ ಸಿಎಂ ಸ್ವಕ್ಷೇತ್ರದಲ್ಲಿ ಮನಕಲುಕುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮಾಲಮ್ಮ (54) ಬಸವಯ್ಯ(65) ಒಂದೇ ದಿನ ಬಾಳ ಪಯಣ ಮುಗಿಸಿದ್ದಾರೆ. ಪತ್ನಿ ಮಾಲಮ್ಮ ಸಾವನ್ನ ಪತಿ ಬಸವಯ್ಯ ಹಿಂಬಾಲಿಸಿದ್ದಾರೆ. ಒಂದೇ ದಿನ ವೃದ್ದ ದಂಪತಿ ಸಾವಿಗೆ ಶರಣಾಗುವ ಮೂಲಕ ಕರುಣಾಜನಕ ಸಂಗತಿಗೆ ಸಾಕ್ಷಿಯಾಗಿದ್ದಾರೆ. ಮಾಲಮ್ಮ ಹಾಗೂ ಬಸವಯ್ಯ ವೃದ್ದ ದಂಪತಿಗೆ ಮೂವರು ಮಕ್ಕಳು. ಶಿವಮಲ್ಲು, ರಾಚಯ್ಯ ಹಾಗೂ ಪಾರ್ವತಮ್ಮ. ಅದ್ಯಾವ ಕಾರಣವೋ ಗೊತ್ತಿಲ್ಲ ಯಾವ ಮಕ್ಕಳ ಮೇಲೂ ಹೊರೆಯಾಗದ ವೃದ್ದ ದಂಪತಿ ಪ್ರತ್ಯೇಕವಾಗಿ ಜೀವನ ಸಾಗಿಸಿದ್ದಾರೆ.
ದೇಹದಲ್ಲಿ ಶಕ್ತಿ ಇರುವವರೆಗೆ ಇವರದ್ದು ಮಾದರಿ ಜೀವನ. ಯಾರ ಹಂಗಿಗೂ ಕಾದವರಲ್ಲ. ತಾನೊಂದು ಬಗೆದರೆ ದೈವ ಒಂದು ಬಗೆಯುತ್ತದೆ ಎಂಬ ನಾಣ್ಣುಡಿಗೆ ಈ ವೃದ್ದ ದಂಪತಿ ಸಾಕ್ಷಿಯಾದರು. ಎರಡು ವರ್ಷಗಳ ಹಿಂದೆ ಮಾಲಮ್ಮ ಅನಾರೋಗ್ಯಕ್ಕೆ ಸಿಲುಕ ಹಾಸಿಗೆ ಹಿಡಿದರು. ಹೀಗಿದ್ದರೂ ಸ್ವಾಭಿಮಾನದ ಬದುಕು ಆಯ್ಕೆ ಮಾಡಿಕೊಂಡ ಪತಿ ಬಸವಯ್ಯ ಯಾರ ಆಶ್ರಯವನ್ನೂ ಬಯಸದೆ ಪತ್ನಿಯ ಶುಶ್ರೂಷೆ ಮಾಡುತ್ತಾ ದಿನಗಳನ್ನ ದೂಡಿದ್ದರು.
ವಿಧಿ ಬಸವಯ್ಯನ ಪಾಲಿನಲ್ಲೂ ಆಟವಾಡಿತು. ವಯೋಸಹಜ ಕಾಯಿಲೆ ಬಸವಯ್ಯನವರನ್ನ ಬಾಧಿಸಿತು. ಬಸವಯ್ಯ ಸಹ ಹಾಸಿಗೆ ಹಿಡಿಯುವ ಹಂತ ತಲುಪಿದ್ರು. ಇಂತಹ ಪರಿಸ್ಥಿತಿಯಲ್ಲೂ ಮಕ್ಕಳ ಆಶ್ರಯ ಪಡೆಯದೆ ಸ್ವಾಭಿಮಾನಕ್ಕೆ ಕಟ್ಟುಬಿದ್ದರು. ವಯಸ್ಸಿನಲ್ಲಿ ಹಿರಿಯರಾದ ಬಸವಯ್ಯ ತಾನು ಮೊದಲು ಪ್ರಾಣ ಬಿಟ್ಟರೆ ಪತ್ನಿಯ ಆರೈಕೆ ಹೇಗೆ ಎಂಬ ಚಿಂತೆ ಕಾಡಿತು. ತಾವಂತೂ ಇಹಲೋಕ ತ್ಯಜಿಸಲು ನಿರ್ಧರಿಸಿ ವಿಷ ಸೇವಿಸಲು ಸಿದ್ದವಾದ್ರು. ಆದ್ರೆ ಮುಂದಿನ ದಿನಗಳಲ್ಲಿ ಮಾಲಮ್ಮನ ಪರಿಸ್ಥಿತಿ ನೆನೆದರು. ಕಣ್ಣೀರು ಹಾಕಿದ್ರು, ಒಂದು ನಿರ್ಧಾರಕ್ಕೂ ಬಂದ್ರು. ವರ್ಷಗಳ ಕಾಲ ಆರೈಕೆ ಮಾಡಿದ ಕೈಯಲ್ಲಿ ಪತ್ನಿಗೆ ವಿಷವುಣಿಸಿದರಂತೆ. ನಂತರ ತಾವೂ ಸೇವಿಸಿಬಿಟ್ಟಿದ್ದಾರೆ.
ಹಾಸಿಗೆ ಹಿಡಿದ ಪತ್ನಿ ಹಾಸಿಗೆಯಲ್ಲೇ ಕೊನೆ ಉಸಿರೆಳೆದಿದ್ದಾರೆ. ಪತಿ ಬಸವಯ್ಯ ರನ್ನ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಿಗ್ಗೆ ಪತ್ನಿ ಕೊನೆ ಉಸಿರೆಳೆದರೆ ಸಂಜೆ ವೇಳೆಗೆ ಬಸವಯ್ಯ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಯಾರ ಹಂಗಿಗೂ ಹಾತೊರೆಯದ ಇಳಿ ವಯಸ್ಸಿನ ಜೀವಗಳು ಸಾವಿನಲ್ಲೂ ಒಂದಾಗಿವೆ. ವೃದ್ದ ದಂಪತಿಯ ಅಂತಿಮ ಪಯಣಕ್ಕೆ ಇಡೀ ಕೆಂಪಿಸಿದ್ದನಹುಂಡಿ ಗ್ರಾಮ ಮರುಗಿದೆ. ಇಡೀ ಗ್ರಾಮ ಭಾರವಾದ ಹೃದಯದಿಂದ ದಂಪತಿಗೆ ಅಂತ್ಯಕ್ರಿಯೆ ನೆರವೇರಿಸಿ ಭಾವಪೂರ್ಣ ವಿದಾಯ ಹೇಳಿದೆ. ಸಿಎಂ ತವರು ಕ್ಷೇತ್ರ ಇಂತಹ ಒಂದು ಕರಳು ಕಿವುಚುವ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

