ಮೈಸೂರು: ಬುಡುಬುಡುಕೆಯವರು ಮನೆಗೆ ನುಗ್ಗಿ ಚಿನ್ನದ ಸರ ಲಪಟಾಯಿಸಿದ ಪ್ರಕರಣ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮನೆ ಕೆಲಸ ಮಾಡುವ ಸರಸ್ವತಿ ಎಂಬುವರು ಪ್ರಕರಣ ದಾಖಲಿಸಿದ್ದಾರೆ. 1.44 ಲಕ್ಷ ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆಂದು ಪ್ರಕರಣ ದಾಖಲಿಸಿದ್ದಾರೆ.
ಮನೆಕೆಲಸ ಮಾಡುವ ಸರಸ್ವತಿ ರವರು ತಮ್ಮ ಮಗನನ್ನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಗ ಮನೆ ಹೊರಗೆ ಸ್ನೇಹಿತರ ಜೊತೆ ಆಟವಾಡುತ್ತಿದ್ದಾಗ ಇಬ್ಬರು ಬುಡಬುಡುಕೆಯವರು ಮನೆಗೆ ಪ್ರವೇಶಿಸಿ ಸ್ವಲ್ಪ ಸಮಯದ ನಂತರ ಹಿಂದಿರುಗಿದ್ದಾರೆ. ಕೆಲಸದಿಂದ ಹಿಂದಿರುಗಿದ ಸರಸ್ವತಿ ರವರು ಪ್ರಿಡ್ಜ್ ಮೇಲೆ ಇಟ್ಟಿದ್ದ ಚಿನ್ನದ ಸರ ಹುಡುಕಿದಾಗ ನಾಪತ್ತೆಯಾಗಿತ್ತು.
ಈ ಬಗ್ಗೆ ಮಗನನ್ನ ವಿಚಾರಿಸಿದಾಗ ಇಬ್ಬರು ಬುಡುಬುಡುಕೆಯವರು ಬಂದು ಮನೆ ಒಳಗೆ ಹೋಗಿದ್ದರೆಂದು ತಿಳಿಸಿದ್ದಾನೆ. ಬುಡುಬುಡುಕೆಯವರ ಕೈಚಳಕ ಎಂದು ಖಚಿತಪಡಿಸಿಕೊಂಡ ಸರಸ್ವತಿ ಇಬ್ಬರು ಅಪರಿಚಿತರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

