ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನ ಆಸ್ಪತ್ರೆಯ ಮೇಲೆ ಪಾಕ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 400 ಜನರು ಮೃತಪಟ್ಟಿದ್ದು, ಸುಮಾರು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಆಸ್ಪತ್ರೆಯ ದೊಡ್ಡ ಭಾಗ ನಾಶವಾಗಿದೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಆದರೆ ಅಫ್ಘಾನ್ ಸರ್ಕಾರದ ಆರೋಪಗಳನ್ನು ಪಾಕಿಸ್ತಾನ ನಿರಾಕರಿಸಿದೆ ಮತ್ತು ಅವುಗಳನ್ನು ಆಧಾರರಹಿತ ಎಂದು ಕರೆದಿದೆ. ತಾವು ಕಾಬೂಲ್‌ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸಿಲ್ಲ ಎಂದು ಹೇಳಿದೆ.
ಈ ವರದಿಗೂ ಕೆಲವೇ ಗಂಟೆಗಳ ಮೊದಲು ಉಭಯ ದೇಶಗಳ ಗಡಿಯಲ್ಲಿ ನಡೆಸಲಾದ ಗುಂಡಿನ ಚಕಮಕಿಯಲ್ಲಿ ಅಫ್ಘಾನಿಸ್ತಾನದಲ್ಲಿ ನಾಲ್ವರ ಸಾವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಎರಡೂ ದೇಶಗಳ ಸಂಘರ್ಷ ಮೂರನೇ ವಾರಕ್ಕೆ ಪ್ರವೇಶಿಸಿದೆ.
ವರದಿಗಳ ಪ್ರಕಾರ, ಪಾಕಿಸ್ತಾನದ ಸೇನೆಯು ಇತ್ತೀಚೆಗೆ ಕಾಬೂಲ್‌ನ 9 ನೇ ಪೊಲೀಸ್ ಜಿಲ್ಲೆಯ ವ್ಯಸನ ಚಿಕಿತ್ಸಾ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಭಾರೀ ಸಾವುನೋವುಗಳು ಉಂಟಾಗಿದೆ. ಪಾಕಿಸ್ತಾನದ ಮಿಲಿಟರಿ ಆಡಳಿತವು ಮತ್ತೊಮ್ಮೆ ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಮತ್ತು ಕಾಬೂಲ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿದೆ.
ಇದರ ಪರಿಣಾಮವಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಸನಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ನಾವು ಈ ಅಪರಾಧವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಅಂತಹ ಕೃತ್ಯವನ್ನು ಎಲ್ಲಾ ಅಂಗೀಕೃತ ತತ್ವಗಳಿಗೆ ವಿರುದ್ಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧವೆಂದು ಪರಿಗಣಿಸುತ್ತೇವೆ ಎಂದು ಅವರು ಹೇಳಿದರು.

