ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಾಲಿನ ದರ ಏರಿಕೆಯಾಗಿದೆ. ರಾಜ್ಯದ ಜನಪ್ರಿಯ ಹಾಲು ಬ್ರಾಂಡ್ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ ‘ಮಿಲ್ಮಾ’ ಹಾಲಿನ ದರವನ್ನು ಲೀಟರ್‌ಗೆ ರೂ. 4 ಹೆಚ್ಚಳ ಮಾಡಲಾಗಿದೆ.
ಜೂನ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಈ ಕ್ರಮ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, “ನಾವು ಹೊಸದಾಗಿ ದರ ಏರಿಕೆ ಮಾಡಿಲ್ಲ. ಹಿಂದಿನ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಈಗ ಜಾರಿಗೆ ತಂದಿದ್ದೇವೆ,” ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ನೀಡಿದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ದಶಕದ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ. ನೂತನ ಮುಖ್ಯಮಂತ್ರಿಯಾಗಿ ವಿ. ಡಿ. ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಒಟ್ಟು 20 ಸಚಿವರಿದ್ದು, ಇವರಲ್ಲಿ 14 ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

