ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.

ಮೃತರನ್ನು ಮಹಾದೇವಿ ವಾರದ (55) ಎಂದು ಗುರುತಿಸಲಾಗಿದೆ. ಇವರ ಪತಿ ಶಿವಾನಂದ ಮನೆಯ ಹೊರಗೆ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊನ್ನೆ ಸುರಿದ ಮಳೆಗೆ ಹಳೆಯ ಮನೆಯ ಛಾವಣಿ ನೆನೆದಿತ್ತು.

ಇಂದು ಮುಂಜಾವ 3.30ರ ಸುಮಾರಿಗೆ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಮಹಾದೇವಿ ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಅವರ ಪತಿ ಶಿವಾನಂದ ಮನೆಯ ಹೊರಗಡೆ ಮಲಗಿದ್ದರಿಂದ ಬದುಕುಳಿದಿದ್ದಾರೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.