ಅಡಿಕೆ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಕೊಕ್ಕೊ ವಲಯದಲ್ಲಿನ ಸವಾಲಿನ ಪರಿಸ್ಥಿತಿಗಳ ನಡುವೆಯೂ, ಪ್ರತಿಷ್ಠಿತ ಬಹುರಾಜ್ಯ ಸಹಕಾರಿ,‘ದ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸ್ಸಿಂಗ್ ಕೊಅಪರೇಟಿವ್ ಲಿಮಿಟೆಡ್ (ದ ಕ್ಯಾಂಪ್ಕೊ ಲಿ.)’ ಸಂಸ್ಥೆಯು 2025-26ನೇ ಸಾಲಿನಲ್ಲಿ ₹3,735 ಕೋಟಿ ಒಟ್ಟು ವ್ಯವಹಾರ ವಹಿವಾಟು ಮತ್ತು ₹49.62 ಕೋಟಿ ತೆರಿಗೆಪೂರ್ವ ಲಾಭ ದಾಖಲಿಸಿ ಒಟ್ಟಾರೆ ಸದೃಢ ಸಾಧನೆ ತೋರಿದೆ.
ಸಂಸ್ಥೆಯ ನಿರಂತರ ಆರ್ಥಿಕ ಶಕ್ತಿ ಹಾಗೂ ಬೆಳೆಗಾರ-ಸದಸ್ಯರ ಬಗೆಗಿನ ಬದ್ಧತೆಯ ಪ್ರತೀಕವಾಗಿ, 2025-26ನೇ ಸಾಲಿಗೆ ಸದಸ್ಯರಿಗೆ ಶೇ. 14ರಷ್ಟು ಡಿವಿಡೆಂಡ್ ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ.
ಆರ್ಥಿಕ ವರ್ಷದ ಪ್ರಮುಖ ಸಾಧನೆಗಳಿಗೆ ನಿರಂತರ ಖರೀದಿ ಹಾಗೂ ಮಾರಾಟ ಕಾರ್ಯಾಚರಣೆ, ಸದಸ್ಯರಿಗೆ ಪೂರ್ಣ ಬೆಂಬಲ, ವ್ಯವಹಾರ ಚಟುವಟಿಕೆಗಳ ವೈವಿಧ್ಯೀಕರಣ, ಡಿಜಿಟಲ್ ಉಪಕ್ರಮಗಳು ಹಾಗೂ ಮೂಲಸೌಕರ್ಯ ಮತ್ತು ಮೌಲ್ಯವರ್ಧನೆಯಲ್ಲಿನ ನಿರಂತರ ಹೂಡಿಕೆಗಳೇ ಈ ಕಾರಣ ಎಂದು ತಿಳಿಸಿದೆ.
ಅಡಿಕೆ — ಕ್ಯಾಂಪ್ಕೊ ವಹಿವಾಟಿನ ಬೆನ್ನೆಲುಬು
ಕಳೆದ ಆರ್ಥಿಕ ವರ್ಷದಲ್ಲಿಯೂ ಅಡಿಕೆಯೇ ಕ್ಯಾಂಪ್ಕೊದ ಪ್ರಮುಖ ವ್ಯವಹಾರವಾಗಿ ಮುಂದುವರಿದಿದೆ. ಸಂಸ್ಥೆಯು ₹2,924.32 ಕೋಟಿ ಮೌಲ್ಯದ 58,742.76 ಮೆ.ಟನ್ ಅಡಿಕೆ ಖರೀದಿಸಿದ್ದು, ಇದರಲ್ಲಿ ₹1,362.13 ಕೋಟಿ ಮೌಲ್ಯದ 24,052.07 ಮೆ.ಟನ್ ಕೆಂಪಡಿಕೆ ಮತ್ತು ₹1,562.19 ಕೋಟಿ ಮೌಲ್ಯದ 34,690.69 ಮೆ.ಟನ್ ಬಿಳಿ ಅಡಿಕೆಯ ಖರೀದಿ ಸೇರಿದೆ.
ಕ್ಯಾಂಪ್ಕೊ ₹2,985.19 ಕೋಟಿ ಮೌಲ್ಯದ 59,088.64 ಮೆ.ಟನ್ ಅಡಿಕೆ ಮಾರಾಟ ಮಾಡಿದ್ದು, ಇದರಲ್ಲಿ 22,914.53 ಮೆ.ಟನ್ ಕೆಂಪಡಿಕೆ ಮತ್ತು 36,174.11 ಮೆ.ಟನ್ ಬಿಳಿ ಅಡಿಕೆಯ ಮಾರಾಟ ಒಳಗೊಂಡಿದೆ.
ತನ್ನ ವ್ಯಾಪಕ ಖರೀದಿ ಜಾಲ ಹಾಗೂ ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಕ್ಯಾಂಪ್ಕೊ ಬೆಳೆಗಾರರಿಗೆ ಖಾತರಿಯ ಮಾರಾಟ ವೇದಿಕೆಯನ್ನು ಒದಗಿಸುತ್ತಾ, ಮಾರುಕಟ್ಟೆ ಸ್ಥಿರತೆ ಮತ್ತು ಉತ್ತಮ ಬೆಲೆ ಪ್ರಾಪ್ತಿಗೆ ಕೊಡುಗೆ ನೀಡುತ್ತಿದೆ.
ಆಮದು ಅಡಿಕೆಯಿಂದ ದೇಶೀಯ ಮಾರುಕಟ್ಟೆಗೆ ಗಂಭೀರ ಸವಾಲು
ಎಲ್ಲಾ ಸಂದರ್ಭಗಳಲ್ಲೂ ಖರೀದಿ ಮತ್ತು ಮಾರುಕಟ್ಟೆ ಕಾರ್ಯಾಚರಣೆ ಮೂಲಕ ದೇಶೀಯ ಅಡಿಕೆ ಬೆಳೆಗಾರರಿಗೆ ಬೆಂಬಲ ನೀಡುತ್ತಿರುವ ಕ್ಯಾಂಪ್ಕೊ, ದೇಶೀಯ ಮಾರುಕಟ್ಟೆಗೆ ಹೆಚ್ಚುತ್ತಿರುವ ಆಮದು ಅಡಿಕೆಯ ಒಳಹರಿವು ಮತ್ತು ಅದರಿಂದ ಭಾರತೀಯ ಬೆಳೆಗಾರರು ಹಾಗೂ ಸಂಘಟಿತ ಮಾರಾಟ ಸಂಸ್ಥೆಗಳು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಆಮದು ಅಡಿಕೆಯನ್ನು ದೇಶೀಯವಾಗಿ ಬೆಳೆದ ಅಡಿಕೆಯೊಂದಿಗೆ ಮಿಶ್ರಣ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ — ಸ್ವತಃ ಕ್ಯಾಂಪ್ಕೊ ಶಾಖೆಗಳಲ್ಲಿ ಮಾರಾಟಕ್ಕೆ ಸಂಚು ನಡೆಸುತ್ತಿರುವುದು ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಇದರಿಂದ ಸರಕಿನ ಮೂಲ ಮತ್ತು ನೈಜತೆಯನ್ನು ಖಚಿತಪಡಿಸುವುದು ಕಷ್ಟವಾಗುತ್ತಿದ್ದು, ಮಾರುಕಟ್ಟೆ ಪಾರದರ್ಶಕತೆ, ಬೆಲೆ ನಿರ್ಧಾರ ಪ್ರಕ್ರಿಯೆ ಹಾಗೂ ದೇಶೀಯ ಬೆಳೆಗಾರರ ಹಿತಾಸಕ್ತಿಗೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಆಮದು ಅಡಿಕೆಯ ಲಭ್ಯತೆ ಹೆಚ್ಚುತ್ತಿರುವುದು ಮಾರುಕಟ್ಟೆ ಬೆಲೆಗಳ ನಿರ್ವಹಣೆಯ ಮೇಲೂ ಒತ್ತಡ ಹೇರುತ್ತಿದೆ. ಕ್ಯಾಂಪ್ಕೊ ದೇಶೀಯ ಉತ್ಪನ್ನವನ್ನು ನ್ಯಾಯೋಚಿತ ದರದಲ್ಲಿ ಖರೀದಿಸಿ ಬೆಳೆಗಾರರಿಗೆ ಖಾತರಿಯ ಮಾರಾಟ ವೇದಿಕೆ ಒದಗಿಸಲು ನಿರಂತರ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ, ಇಂತಹ ಬೆಳವಣಿಗೆಗಳು ದೇಶಿಯ ಬೆಳೆಗಾರರಿಗೆ ಉತ್ತಮ ಬೆಲೆ ನೀಡಲು ಪ್ರಯತ್ನಿಸುತ್ತಿರುವ ಕ್ಯಾಂಪ್ಕೊ ಪ್ರಯತ್ನದ ಮೇಲೆ ದುಷ್ಪರಿಣಾಮ ಬೀರಬಲ್ಲವು.
ಆದ್ದರಿಂದ ಅಡಿಕೆ ಆಮದಿನ ಮೇಲೆ ಕಟ್ಟುನಿಟ್ಟಿನ ನಿಗಾ, ಆಮದು ನಿಯಮಗಳ ಪರಿಣಾಮಕಾರಿ ಜಾರಿ, ತಪ್ಪು ವರ್ಗೀಕರಣಕ್ಕೆ ತಡೆ ಹಾಗೂ ಆಮದು ಅಡಿಕೆಯನ್ನು ದೇಶೀಯ ಉತ್ಪನ್ನದೊಂದಿಗೆ ಬೆರೆಸದಂತೆ ಅಥವಾ ದೇಶೀಯ ಉತ್ಪನ್ನವೆಂದು ಚಲಾವಣೆಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಯಾಂಪ್ಕೊ ಸರಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಭೇಟಿಯ ವೇಳೆ ಈ ವಿಷಯವನ್ನು ಮಾನ್ಯ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ. ಅಕ್ರಮ ಆಮದು, ತಪ್ಪು ವರ್ಗೀಕರಣ ಹಾಗೂ ಆಮದು ಅಡಿಕೆ ದೇಶೀಯ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಕ್ಯಾಂಪ್ಕೊ, ದೇಶೀಯ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಪರಿಣಾಮಕಾರಿ ಮತ್ತು ಸಮನ್ವಯದ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.
ಉತ್ತರ ಪ್ರದೇಶದ ಮಂಡಿ ತೆರಿಗೆ ವಿಷಯ ಪ್ರಸ್ತಾಪ
ಉತ್ತರ ಪ್ರದೇಶದಲ್ಲಿ ಅಡಿಕೆ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯ ವಿಷಯವನ್ನೂ ಕ್ಯಾಂಪ್ಕೊ ಪ್ರಸ್ತಾಪಿಸಿದೆ. ಈ ತೆರಿಗೆಯು ಅಂತರ-ರಾಜ್ಯ ಮಾರಾಟದ ವೆಚ್ಚವನ್ನು ಹೆಚ್ಚಿಸುತ್ತಿದ್ದು, ಸಂಸ್ಥೆಯ ಕಾರ್ಯಾಚರಣೆಯ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುತ್ತಿದೆ.
“ಒಂದು ರಾಷ್ಟ್ರ, ಒಂದು ತೆರಿಗೆ” ತತ್ವದ ಹಿನ್ನೆಲೆಯಲ್ಲಿ ಹಾಗೂ ಕೃಷಿ ಉತ್ಪನ್ನಗಳ ಅಂತರ-ರಾಜ್ಯ ಸಾಗಾಟ ಮತ್ತು ಮಾರಾಟದ ಮೇಲೆ ಹೆಚ್ಚುವರಿ ತೆರಿಗೆ-ಸುಂಕದ ಹೊರೆ ಬೀಳಬಾರದೆಂಬ ದೃಷ್ಟಿಯಿಂದ ಈ ವಿಷಯವನ್ನು ಮಾನ್ಯ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲಾಗಿದೆ.ಇದನ್ನು ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಕಳುಹಿಸಲಾಗಿದೆ.
ಕ್ಯಾಂಪ್ಕೊ ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿ ರಾಜ್ಯ ಸರ್ಕಾರದ ಮುಂದೆ ವಿಷಯ ಮಂಡಿಸಿದೆ. ಚರ್ಚೆಯ ವೇಳೆ, ಕ್ಯಾಂಪ್ಕೊಗೆ ನಿರ್ದಿಷ್ಟ ವಿನಾಯಿತಿ ನೀಡಿದರೆ ಇತರ ಸಂಸ್ಥೆಗಳಿಂದಲೂ ಇದೇ ಮಾದರಿಯ ಬೇಡಿಕೆಗಳಿಗೆ ಪೂರ್ವನಿದರ್ಶನ ಸೃಷ್ಟಿಯಾಗಬಹುದೆಂದು ರಾಜ್ಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ವಿಷಯ ಇನ್ನೂ ಇತ್ಯರ್ಥವಾಗಿಲ್ಲ.
ಇಂತಹ ಸುಂಕಗಳ ವಿಚಾರದಲ್ಲಿ ತರ್ಕಬದ್ಧ ಹಾಗೂ ಏಕರೂಪದ ಧೋರಣೆ ಇದ್ದರೆ ಮಾತ್ರ ಕೃಷಿ ಉತ್ಪನ್ನಗಳ ಸುಗಮ ಅಂತರ-ರಾಜ್ಯ ಸಾಗಾಟ ಸಾಧ್ಯವಾಗಿ, ಅನಗತ್ಯ ವಹಿವಾಟು ವೆಚ್ಚ ಕಡಿಮೆಯಾಗಿ, ಅಂತಿಮವಾಗಿ ರೈತರ ಮತ್ತು ಗ್ರಾಹಕರ ಹಿತ ಕಾಪಾಡಲಾಗುತ್ತದೆ ಎಂಬ ನಂಬಿಕೆಯೊಂದಿಗೆ ಕ್ಯಾಂಪ್ಕೊ ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಈ ವಿಷಯದ ಚರ್ಚೆಯನ್ನು ಮುಂದುವರಿಸಿದೆ.
ದೇಶೀಯ ಅಡಿಕೆ ಬೆಳೆಗಾರರಿಗೆ ನ್ಯಾಯಯುತ, ಪಾರದರ್ಶಕ ಮತ್ತು ಸ್ಥಿರ ಮಾರುಕಟ್ಟೆ ದೊರೆಯುವಂತೆ ಮಾಡಲು ಅಡಿಕೆ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ ಮಂಡಿಸಿ ಸೂಕ್ತ ನೀತಿ ಜಾರಿಗೊಳಿಸಲು ಒತ್ತಾಯಿಸುವ ಕಾರ್ಯವನ್ನು ಸಂಸ್ಥೆ ಮುಂದುವರಿಸಲಿದೆ.
ಕೊಕ್ಕೊ ಮತ್ತು ಚಾಕೊಲೇಟ್ ವಿಭಾಗದಲ್ಲಿ ಉತ್ತಮ ಸಾಧನೆ
ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ ₹27.96 ಕೋಟಿ ಮೌಲ್ಯದ 2,351.18 ಮೆ.ಟನ್ ಹಸಿ ಕೊಕ್ಕೊ ಬೀಜ ಮತ್ತು ₹185.52 ಕೋಟಿ ಮೌಲ್ಯದ 4,021.85 ಮೆ.ಟನ್ ಒಣ ಬೀಜ ಖರೀದಿಸಿದೆ. ಚಾಕೊಲೇಟ್ ಕಾರ್ಖಾನೆಯಲ್ಲಿ ಒಟ್ಟು 5,224.64 ಮೆ.ಟನ್ ಒಣ ಬೀಜ ಬಳಕೆಯಾಗಿದೆ.
ಹಿಂದಿನ ವರ್ಷದಲ್ಲಿ ಕಂಡುಬಂದ ಬೆಲೆ ಏರಿಕೆಯಿಂದಾಗಿ ಕೊಕ್ಕೊ ಬೀಜದ ಖರೀದಿ ವೆಚ್ಚ ವಿಪರೀತ ಹೆಚ್ಚಾಗಿದ್ದರೂ, ಚಾಕೊಲೇಟ್ ವಿಭಾಗವು ಭೌತಿಕ ಬೆಳವಣಿಗೆ ಸಾಧಿಸಿ ಗಣನೀಯ ಮಾರಾಟ ದಾಖಲಿಸಿದೆ. ಉತ್ಪಾದನೆ ಮತ್ತು ಮಾರಾಟ ಬಹುತೇಕ ಹೆಚ್ಚಿನ ವೆಚ್ಚದ ದಾಸ್ತಾನನ್ನು ಆಧರಿಸಿದ್ದರಿಂದ ಲಾಭಾಂಶದ ಮೇಲಿನ ವ್ಯತಿರಿಕ್ತ ಪರಿಣಾಮ ಮುಂದುವರಿಯಿತು.
ಕ್ಯಾAಪ್ಕೊ ಚಾಕೊಲೇಟ್ ಕಾರ್ಖಾನೆಯು ಆರ್ಥಿಕ ವರ್ಷದಲ್ಲಿ 12,606.40 ಮೆ.ಟನ್ ಉತ್ಪಾದನೆ ಮಾಡಿದ್ದು, ಇದರಲ್ಲಿ ಕ್ಯಾಂಪ್ಕೊ ಸ್ವಂತ ಬ್ರಾಂಡ್ ಅಡಿಯಲ್ಲಿ 12,257.58 ಮೆ.ಟನ್ ಚಾಕೊಲೇಟ್ ಉತ್ಪನ್ನಗಳು, ಜಾಬ್-ವರ್ಕ್ ಅಡಿಯಲ್ಲಿ 258.40 ಮೆ.ಟನ್ ಹಾಗೂ 90.42 ಮೆ.ಟನ್ ತೆಂಗಿನ ಎಣ್ಣೆ ಸೇರಿವೆ.
ಸಾಮರ್ಥ್ಯ ವಿಸ್ತರಣೆಯ ಭಾಗವಾಗಿ, ‘ಕೋಕೋ ಬಟರ್ ಪ್ರೆಸ್’ ಸೌಲಭ್ಯದಲ್ಲಿ 18 ಪಾತ್ರೆಗಳನ್ನು ಅಳವಡಿಸಲಾಗಿದ್ದು, ಇದರಿಂದ ನಮ್ಮ ಬೆಣ್ಣೆಯ ಅಗತ್ಯತೆಗಾಗಿ ಕೋಕೋ ಮಾಸ್ ಸಂಸ್ಕರಣಾ ಸಾಮರ್ಥ್ಯವು ದಿನಕ್ಕೆ ಹೆಚ್ಚುವರಿ 15 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ.
₹488.65 ಕೋಟಿ ಮೌಲ್ಯದ ಕೊಕ್ಕೊ ಮತ್ತು ಚಾಕೊಲೇಟ್ ಉತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ ಸಿದ್ಧ/ಚಿಲ್ಲರೆ ಚಾಕೊಲೇಟ್ ವಿಭಾಗದಿಂದ ₹75.59 ಕೋಟಿ, ಕೈಗಾರಿಕಾ ಚಾಕೊಲೇಟ್ ವಿಭಾಗದಿಂದ ₹384.91 ಕೋಟಿ ಮತ್ತು ರಫ್ತಿನಿಂದ ₹24.82 ಕೋಟಿ ಸೇರಿದೆ. ತೆಂಗಿನ ಎಣ್ಣೆ ಮಾರಾಟದಿಂದ ₹3.33 ಕೋಟಿ ಹಾಗೂ ಜಾಬ್-ವರ್ಕ್ ಸಂಸ್ಕರಣಾ ಶುಲ್ಕದಿಂದ ₹1.25 ಕೋಟಿ ಆದಾಯ ಬಂದಿದೆ.
ಕೊಕ್ಕೊ ಬೆಲೆಗಳು ಸ್ಥಿರತೆಯತ್ತ ಸಾಗುತ್ತಿರುವ ಮತ್ತು ಪೂರೈಕೆ-ಬೇಡಿಕೆ ಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಾಕೊಲೇಟ್ ವಿಭಾಗದಿಂದ ಉತ್ತಮ ಲಾಭಾಂಶ ಮತ್ತು ಸದೃಢ ಸಾಧನೆಯನ್ನು ಕ್ಯಾಂಪ್ಕೊ ನಿರೀಕ್ಷಿಸಿದೆ.
ಪ್ರೀಮಿಯಂ ಚಾಕೊಲೇಟ್ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಛಾಪು
ಉತ್ಪನ್ನ ಅಭಿವೃದ್ಧಿ, ಪ್ಯಾಕೇಜಿಂಗ್ ಸುಧಾರಣೆ ಮತ್ತು ಚಿಲ್ಲರೆ ಮಾರಾಟ ಜಾಲದ ವಿಸ್ತರಣೆಯ ಮೂಲಕ ಕ್ಯಾಂಪ್ಕೊ ತನ್ನ ಚಾಕೊಲೇಟ್ ಬ್ರಾಂಡ್ ಮತ್ತು ಮಾರುಕಟ್ಟೆ ಉಪಸ್ಥಿತಿಯನ್ನು ಬಲಪಡಿಸುತ್ತಿದೆ.
ಕ್ಯಾಂಪ್ಕೊದ ಪ್ರೀಮಿಯಂ ಚಾಕೊಲೇಟ್ ಶ್ರೇಣಿ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯವಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯಾಂಪ್ಕೊ ಬ್ರಾಂಡ್ ಪರಿಚಯವಗುತ್ತಿದೆ.
ಚಾಕೊಲೇಟ್ ಉತ್ಪಾದನಾ ಮೂಲಸೌಕರ್ಯ ಬಲವರ್ಧನೆಗೂ ಸಂಸ್ಥೆ ಕ್ರಮ ಕೈಗೊಂಡಿದೆ. ಹೊಸ ರಿಫೈನರ್ ಅಳವಡಿಸಲಾಗಿದ್ದು, ಹೆಚ್ಚುವರಿ ಕೊಕ್ಕೊ ಬಟರ್ ಪ್ರೆಸ್ ಖರೀದಿ ಪ್ರಗತಿಯಲ್ಲಿದೆ.
ರಬ್ಬರ್ ಮತ್ತು ಕಾಳುಮೆಣಸು ವಿಭಾಗಗಳ ಕೊಡುಗೆ
ಕ್ಯಾಂಪ್ಕೊ ₹32.41 ಕೋಟಿ ಮೌಲ್ಯದ 1,704.77 ಮೆ.ಟನ್ ರಬ್ಬರ್ ಖರೀದಿಸಿ, ₹33.67 ಕೋಟಿ ಮೌಲ್ಯದ 1,728.38 ಮೆ.ಟನ್ ಮಾರಾಟ ಮಾಡಿದೆ. ಜೊತೆಗೆ ₹113.22 ಕೋಟಿ ಮೌಲ್ಯದ 1,656.12 ಮೆ.ಟನ್ ಕಾಳುಮೆಣಸು ಖರೀದಿಸಿ, ₹134.27 ಕೋಟಿ ಮೌಲ್ಯದ 1,982.01 ಮೆ.ಟನ್ ಮಾರಾಟ ಮಾಡುವ ಮೂಲಕ ತೋಟಗಾರಿಕಾ ಬೆಳೆ ವಲಯದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಂಡಿದೆ.
ಕೃಷಿ ಉತ್ತೇಜಕ ಉತ್ಪನ್ನಗಳ ಮೂಲಕ ರೈತರಿಗೆ ಬೆಂಬಲ :
ಗುಣಮಟ್ಟದ ಕೃಷಿ ಉತ್ತೇಜಕ ಉತ್ಪನ್ನಗಳನ್ನು ಸಮಂಜಸ ದರದಲ್ಲಿ ಒದಗಿಸುವ ಮೂಲಕ ಕ್ಯಾಂಪ್ಕೊ ತನ್ನ ಬೆಳೆಗಾರ-ಸದಸ್ಯರಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ. ವರ್ಷದ ಅವಧಿಯಲ್ಲಿ ಕ್ಯಾಂಪ್ಕೊ ಶಾಖೆಗಳು ಮತ್ತು ಏಜೆಂಟ್ ಸಂಘಗಳ ಮೂಲಕ ಕ್ಯಾಂಪ್ಕೊ ಬ್ರಾಂಡ್‌ನ 357.27 ಮೆ.ಟನ್ ಐಎಸ್‌ಐ ಗುಣಮಟ್ಟದ ಮೈಲುತುತ್ತು ರೈತರಿಗೆ ಸಬ್ಸಿಡಿ ಸಹಿತ ವಿತರಿಸಲಾಗಿದೆ.
ಕ್ಯಾಂಪ್ಕೊ ಆಯುಷ್- ಸಮೃದ್ಧ ಸಾವಯವ ಗೊಬ್ಬರ ಮತ್ತು ಕ್ಯಾಂಪ್ಕೊ ಪೌಷ್ಟಿಕ-ಸೂಕ್ಷ್ಮ ಪೋಷಕಾಂಶಗಳ ಮಿಶ್ರಣ ಗೊಬ್ಬರ ಸೇರಿದಂತೆ ಕ್ಯಾಂಪ್ಕೊ ಬ್ರಾಂಡ್‌ನ ಗೊಬ್ಬರ ಉತ್ಪನ್ನಗಳ ಮಾರಾಟ 5,181.93 ಮೆ.ಟನ್ (₹7.32 ಕೋಟಿ ಮೌಲ್ಯ) ತಲುಪಿದೆ.
ಇದಲ್ಲದೆ, ₹1.86 ಕೋಟಿ ಮೌಲ್ಯದ 1,420.45 ಮೆ.ಟನ್ ಕ್ಯಾಂಪ್ಕೊ ಡೊಲೊಮೈಟ್ ಮತ್ತು ₹0.15 ಕೋಟಿ ಮೌಲ್ಯದ 5.51 ಲೀಟರ್ಸ್ ಕ್ಯಾಂಪ್ಕೊ ಮ್ಯಾಕ್ಸ್ವೆಟ್ ಮಾರಾಟವಾಗಿದೆ. ಈ ಉತ್ಪನ್ನ ಶ್ರೇಣಿಯು ಮಣ್ಣಿನ ಆರೋಗ್ಯ ಸುಧಾರಣೆ, ಪೋಷಕಾಂಶ ಕೊರತೆ ನಿವಾರಣೆ, ಬೆಳೆ ಉತ್ಪಾದಕತೆ ಹೆಚ್ಚಳ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
1.16 ಲಕ್ಷ ಕೊಕ್ಕೊ ಸಸಿಗಳ ವಿತರಣೆ
ಕೊಕ್ಕೊ ಕೃಷಿಯನ್ನು ಬಲಪಡಿಸಿ ಗುಣಮಟ್ಟದ ಕೊಕ್ಕೊ ಗಿಡಗಳ ಪೂರೈಸುವ ಪ್ರಯತ್ನದ ಭಾಗವಾಗಿ, 2025-26ರಲ್ಲಿ ಕ್ಯಾಂಪ್ಕೊ 1,16,275 ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಿದೆ. 2026-27ನೇ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಸಂಸ್ಥೆ ಯೋಜಿಸಿದೆ.
ಸದಸ್ಯ ಸೌಲಭ್ಯ ಯೋಜನೆಗಳಡಿ ₹86.42 ಲಕ್ಷ ನೆರವು
ಬೆಳೆಗಾರ-ಸದಸ್ಯರ ಕಲ್ಯಾಣಾಭಿವೃದ್ಧಿಯನ್ನು ಕ್ಯಾಂಪ್ಕೊ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ.
2025-26ರ ಅವಧಿಯಲ್ಲಿ ವಿವಿಧ ಸದಸ್ಯ ಸೌಲಭ್ಯ ಯೋಜನೆಗಳಡಿ ಒಟ್ಟು 120 ಫಲಾನುಭವಿಗಳಿಗೆ ₹86.42 ಲಕ್ಷ ಆರ್ಥಿಕ ನೆರವು ದೊರೆತಿದೆ. ವಿವರ ಈ ಕೆಳಗಿನಂತಿದೆ:
● ಓಪನ್ ಹಾರ್ಟ್ ಸರ್ಜರಿ — 17 ಫಲಾನುಭವಿಗಳು — ₹30.98 ಲಕ್ಷ
● ಮೂತ್ರಪಿಂಡ ಕಸಿ — 2 ಫಲಾನುಭವಿಗಳು — ₹6.00 ಲಕ್ಷ
● ಡಯಾಲಿಸಿಸ್ — 10 ಫಲಾನುಭವಿಗಳು — ₹2.66 ಲಕ್ಷ
● ಆಂಜಿಯೋಪ್ಲಾಸ್ಟಿ — 55 ಫಲಾನುಭವಿಗಳು — ₹25.59 ಲಕ್ಷ
● ಅಪಘಾತ ಮರಣ ಪರಿಹಾರ — 17 ಫಲಾನುಭವಿಗಳು — ₹8.50 ಲಕ್ಷ
● ಶಿಕ್ಷಣ — 4 ಫಲಾನುಭವಿಗಳು — ₹2.00 ಲಕ್ಷ
● ದೀರ್ಘಕಾಲದ ಆಸ್ಪತ್ರೆ ಚಿಕಿತ್ಸಾ ವೆಚ್ಚ — 15 ಫಲಾನುಭವಿಗಳು — ₹10.70 ಲಕ್ಷ
ಸಂಸ್ಥೆಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು, ಗಂಭೀರ ವೈದ್ಯಕೀಯ ಚಿಕಿತ್ಸೆ, ಅಪಘಾತ ಮರಣ, ಶಾಶ್ವತ ಪೂರ್ಣ ಅಂಗವೈಕಲ್ಯ, ಶಿಕ್ಷಣ ಹಾಗೂ ಇತರ ನಿರ್ದಿಷ್ಟ ಸಂದರ್ಭಗಳಿಗೆ ಈ ಯೋಜನೆಗಳಡಿ ಆರ್ಥಿಕ ನೆರವು ದೊರೆಯುತ್ತದೆ.
ಈ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ಸಕ್ರಿಯ ಸದಸ್ಯತ್ವದ ವ್ಯಾಖ್ಯಾನವನ್ನು 2025ರ ಜನವರಿ 1ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದ್ದು, ಸದಸ್ಯರು ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ ನಿರಂತರವಾಗಿ, ವರ್ಷಕ್ಕೆ ಸರಾಸರಿ ಒಂದು ಕ್ವಿಂಟಾಲ್‌ನಂತೆ ಅಡಿಕೆ ನೀಡಿರಬೇಕಾಗುತ್ತದೆ.
ಬೆಳೆಗಾರರ ಸಭೆಗಳ ಮೂಲಕ ರೈತರೊಂದಿಗೆ ನೇರ ಸಂವಾದ
ಸರಪಾಡಿ ಮತ್ತು ಪೆರ್ಲದಲ್ಲಿ ಆಯೋಜಿಸಲಾದ ಬೆಳೆಗಾರರ ಸಭೆಗಳ ಮೂಲಕ ಕ್ಯಾಂಪ್ಕೊ ಬೆಳೆಗಾರರೊಂದಿಗೆ ನೇರ ಸಂಪರ್ಕ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದೆ.
ಈ ಸಭೆಗಳು ರೈತರಿಗೆ ತಮ್ಮ ಸಮಸ್ಯೆಗಳು, ಸಲಹೆಗಳು ಮತ್ತು ನಿರೀಕ್ಷೆಗಳನ್ನು ನೇರವಾಗಿ ತಿಳಿಸಲು ಅವಕಾಶ ಕಲ್ಪಿಸಿದ್ದು, ಕ್ಷೇತ್ರಮಟ್ಟದ ಸವಾಲುಗಳನ್ನು ಅರಿತು ಬೆಳೆಗಾರರ ಶಿಫಾರಸುಗಳನ್ನು ತನ್ನ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲು ಕ್ಯಾಂಪ್ಕೊಗೆ ನೆರವಾಗಿವೆ.
ಖರೀದಿ ಮತ್ತು ಸೇವಾ ಜಾಲದ ವಿಸ್ತರಣೆ
ಬೆಳೆಗಾರರ ಮನೆ- ಮನ ತಲುಪುವ ಪ್ರಯತ್ನವನ್ನು ಕ್ಯಾಂಪ್ಕೊ ಮುಂದುವರಿಸಿದೆ.
2025-26ರ ಅವಧಿಯಲ್ಲಿ ಸದಸ್ಯ-ಏಜೆಂಟ್ ಸಂಘಗಳ ಮೂಲಕ ಶಿವಮೊಗ್ಗ ಶಾಖೆಯ ವ್ಯಾಪ್ತಿಯ ರಿಪ್ಪನ್‌ಪೇಟೆ, ತುಮಕೂರು ಶಾಖೆಯ ವ್ಯಾಪ್ತಿಯ ಚೇಳೂರು ಮತ್ತು ವಿಟ್ಲ ಶಾಖೆಯ ವ್ಯಾಪ್ತಿಯ ಸರಪಾಡಿಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸ್ವತಂತ್ರ ಶಾಖಾ ಜಾಲವನ್ನು ಮತ್ತಷ್ಟು ಬಲಪಡಿಸುತ್ತಾ, 2026ರ ಮೇ 26ರಂದು ಮಾತಮಂಗಲಂ ಮತ್ತು ಜುಲೈ 13ರಂದು ತಿಪಟೂರು ಶಾಖೆಗಳಲ್ಲಿ ಕ್ಯಾಂಪ್ಕೊ ಕಾರ್ಯಾರಂಭ ಮಾಡಿದೆ.
ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು:
● ಶಿವಮೊಗ್ಗದಲ್ಲಿ 1ಲಕ್ಷ ಚೀಲ ದಾಸ್ತಾನು ಸಾಮರ್ಥ್ಯದ ಸುಮಾರು 30,000 ಚದರ ಅಡಿ ವಿಸ್ತೀರ್ಣದ ಉದ್ದೇಶಿತ ಗೋದಾಮ್ ಕಾಮಗಾರಿ.
● ಚನ್ನಗಿರಿಯಲ್ಲಿ ಗ್ರೇಡಿಂಗ್ ಹಾಲ್ ಕಾಮಗಾರಿ ಪ್ರಗತಿಯಲ್ಲಿದೆ.
● ಪೊನ್ನು ಕುನಮ್ ಶಾಖೆಯನ್ನು ಕಾಳುಮೆಣಸು ಸಂಸ್ಕರಣ ಘಟಕವಾಗಿ ಉನ್ನತಿಕರಿಸಲಾಗಿದೆ.
● ವಿಟ್ಲದಲ್ಲಿ 91 ಸೆಂಟ್ಸ್ ಖರೀದಿಸಿ ಸುಮಾರು 30,000 ಚ.ಅ ವಿಸ್ತೀರ್ಣದ ಕಚೇರಿ ಮತ್ತು ಗೋದಾಮ್ ಮಳಿಗೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
● ತಮಿಳುನಾಡಿನ ಧಾರಾಪುರಂ ಅಲ್ಲಿ 550 ಮೆ.ಟನ್ ಕೊಕ್ಕೊ ಒಣ ಬೀಜ ದಾಸ್ತಾನು ಸಾಮರ್ಥ್ಯದ 8,000 ಚ.ಅ ವಿಸ್ತೀರ್ಣದ ಗೋದಾಮ್ ನಿರ್ಮಾಣ ಮಾಡಲಾಗುವುದು.
ಇಲ್ಲಿ ಈಗಾಗಲೆ 11 ಡ್ರೈಯಿಂಗ್ ಯಾರ್ಡ್ ಗಳು ಕಾರ್ಯಾಚರಣೆ ಮಾಡುತ್ತಿದ್ದು ಒಟ್ಟಾರೆ 165 ಮೆ.ಟನ್ ಕೊಕ್ಕೊ ಹಸಿ ಬೀಜ ಒಣಗಿಸುವ ಸಾಮರ್ಥ್ಯ ಹೊಂದಿದೆ. ಸೌಲಭ್ಯವನ್ನು ಮತ್ತಷ್ಟು ಸುಧಾರಿಸಲು, 28,500 ಚದರ ಅಡಿ ವಿಸ್ತೀರ್ಣದಲ್ಲಿ 4 ಹೆಚ್ಚುವರಿ ಡ್ರೈಯಿಂಗ್ ಯಾರ್ಡ್ ಗಳನ್ನು ಯೋಜಿಸಲಾಗುತ್ತಿದ್ದು, ಇದು ಹಸಿ ಕೊಕ್ಕೊ ಬೀಜಗಳಿಗೆ 60 ಮೆಟ್ರಿಕ್ ಟನ್‌ನಷ್ಟು (ಒಖಿ) ಹೆಚ್ಚುವರಿ ಒಣಗಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.
ಬೆಳೆಗಾರನ ಕೈಯಲ್ಲಿ ಕ್ಯಾಂಪ್ಕೊ ಕಿಸಾನ್ ಮಿತ್ರ :
ಡಿಜಿಟಲ್ ಪರಿವರ್ತನೆ ಕಾರ್ಯಕ್ರಮದ ಭಾಗವಾಗಿ, ಇಆರ್‌ಪಿ ವ್ಯವಸ್ಥೆಯೊಂದಿಗೆ ಸಂಯೋಜಿತವಾದ ಕ್ಯಾಂಪ್ಕೊ ಕಿಸಾನ್ ಮಿತ್ರ ಮೊಬೈಲ್ ಆ್ಯಪ್ ಅನ್ನು ಕ್ಯಾಂಪ್ಕೊ ಯಶಸ್ವಿಯಾಗಿ ಬಿಡುಗಡೆಗೊಳಿಸಿದೆ.
ಈ ಆ್ಯಪ್ ಮೂಲಕ ಸದಸ್ಯರು ತಮ್ಮ ಪ್ರೊಫೈಲ್, ಷೇರು ವಿವರ, ಡಿವಿಡೆಂಡ್, ಪ್ರೋತ್ಸಾಹಧನ, ಠೇವಣಿ, ಸಾಲ, ಮಾರುಕಟ್ಟೆ ದರ, ಶಾಖೆಗಳ ಮಾಹಿತಿ, ಅಧಿಸೂಚನೆಗಳು, ಕ್ಯಾಂಪ್ಕೊ ಪಡೆ ವಿವರ ಸೇರಿದಂತೆ ಹಲವು ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುಲಭವಾಗಿ ಪಡೆಯಬಹುದು.
ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ಪಾರದರ್ಶಕ, ತಂತ್ರಜ್ಞಾನ ಆಧಾರಿತ ಮತ್ತು ಸದಸ್ಯ ಕೇಂದ್ರಿತ ಸೇವಾ ವಿತರಣೆಯತ್ತ ಇದು ಮಹತ್ವದ ಹೆಜ್ಜೆಯಾಗಿದೆ.
ಕ್ಯಾಂಪ್ಕೊ ಕಾರ್ಟ್ ಸೇವೆಯ ಮೂಲಕ ನೇರ ಗ್ರಾಹಕ ಸಂಪರ್ಕ
ಕ್ಯಾಂಪ್ಕೊ ತನ್ನ ಅಧಿಕೃತ ಆನ್‌ಲೈನ್ ಶಾಪಿಂಗ್ ವೇದಿಕೆ ಕ್ಯಾಂಪ್ಕೊ ಕಾರ್ಟ್ ಅನ್ನು 2025ರ ಡಿಸೆಂಬರ್ 11ರಂದು ಆರಂಭಿಸಿದೆ.
ದೇಶದಾದ್ಯಂತ ಗ್ರಾಹಕರು ಅಸಲಿ ಕ್ಯಾಂಪ್ಕೊ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಈ ವೇದಿಕೆ ಅವಕಾಶ ಕಲ್ಪಿಸಿದ್ದು, ಸಂಸ್ಥೆಯ ಡಿಜಿಟಲ್ ಪರಿವರ್ತನೆ ಮತ್ತು ನೇರ-ಗ್ರಾಹಕ ಸಂಪರ್ಕದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ವಿಸ್ತರಣೆ :
ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ವಿಸ್ತರಿಸುವ ತನ್ನ ಪ್ರಯತ್ನಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಕ್ಯಾಂಪ್ಕೊ ‘ನ್ಯಾಷನಲ್ ಕೋ-ಆಪರೇಟಿವ್ ಎಕ್ಸ್ಪೋರ್ಟ್ಸ್ ಲಿಮಿಟೆಡ್’ ನ ಸದಸ್ಯತ್ವವನ್ನು ಪಡೆದುಕೊಂಡಿದೆ.
ವರ್ಷದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸುವ ಪ್ರಯತ್ನಗಳನ್ನು ಕ್ಯಾಂಪ್ಕೊ ಮುಂದುವರಿಸಿದೆ. ತನ್ನ ಶಾಖೆಗಳಲ್ಲಿ ಖರೀದಿಸಿ ಸಂಸ್ಕರಿಸಿದ 130 ಮೆ.ಟನ್ ಉತ್ಕೃಷ್ಟ ಗುಣಮಟ್ಟದ ಭಾರತೀಯ ಅಡಿಕೆಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡಲಾಗಿದೆ.
ಡ್ರಿಂಕಿಂಗ್ ಚಾಕೊಲೇಟ್ ಪುಡಿ ಮತ್ತು ಕೈಗಾರಿಕಾ ಕೊಕ್ಕೊ ಉತ್ಪನ್ನಗಳೂ ರಫ್ತಿನಲ್ಲಿ ಸೇರಿವೆ. ವರ್ಷದ ರಫ್ತು ವಿವರ:
● ಅಡಿಕೆ — 130 ಮೆ.ಟನ್ — ₹6.55 ಕೋಟಿ
● ಡ್ರಿಂಕಿಂಗ್ ಚಾಕೊಲೇಟ್ ಪುಡಿ / ಕೈಗಾರಿಕಾ ಕೊಕ್ಕೊ ಉತ್ಪನ್ನಗಳು — 1,269.97 ಮೆ.ಟನ್ — ₹23.09 ಕೋಟಿ
● ಡ್ರಿಂಕಿಂಗ್ ಚಾಕೊಲೇಟ್ ಪುಡಿ — 74.14 ಮೆ.ಟನ್ — ₹1.74 ಕೋಟಿ
2026ರ ಜನವರಿಯಲ್ಲಿ ದುಬೈನಲ್ಲಿ ನಡೆದ ಗಲ್ಫ್ ಫುಡ್ ಫೆಸ್ಟಿವಲ್‌ನಲ್ಲಿ ಕ್ಯಾಂಪ್ಕೊ ಭಾಗವಹಿಸಿದ್ದು, ತನ್ನ ಉತ್ಪನ್ನ ಶ್ರೇಣಿಯನ್ನು ಪ್ರದರ್ಶಿಸಿ ಅಂತಾರಾಷ್ಟ್ರೀಯ ವ್ಯವಹಾರ ಅವಕಾಶಗಳನ್ನು ಶೋಧಿಸಲು ಅವಕಾಶ ದೊರೆಯಿತು. ಸಂಶೋಧನೆ ಮತ್ತು ಗ್ರಾಮೀಣ ತಂತ್ರಜ್ಞಾನಕ್ಕೆ ಒತ್ತು.
ಸಂಶೋಧನೆ, ತಂತ್ರಜ್ಞಾನ ಮತ್ತು ರೈತಪರ ಆವಿಷ್ಕಾರಗಳಿಗೆ ಕ್ಯಾಂಪ್ಕೊ ನಿರಂತರವಾಗಿ ಮಹತ್ವ ನೀಡುತ್ತಾ ಬಂದಿದೆ. ಮಹಾಮಂಡಲದ ಸಹಯೋಗದೊಂದಿಗೆ ಸಿಸ್ಟಮ್ಯಾಟಿಕ್ ರಿವೈಟಲೈಸೇಶನ್ ಆಫ್ ದಿ ಅರೆಕನಟ್ ಇಕೋಸಿಸ್ಟಮ್ ಇನ್ ಕರ್ನಾಟಕ ಅಂಡ್ ಕೇರಳ – ಎ ಮಲ್ಟಿಡಿಸಿಪ್ಲಿನರಿ ಫ್ರೇಮ್‌ವರ್ಕ್ ಫಾರ್ ಪ್ಯಾಥೊಲಾಜಿಕಲ್, ಅಗ್ರೊನಾಮಿಕ್ ಅಂಡ್ ಇಕೋಲಾಜಿಕಲ್ ರೆಸಿಲಿಯೆನ್ಸ್( “ಕರ್ನಾಟಕ ಮತ್ತು ಕೇರಳದಲ್ಲಿ ಅಡಿಕೆ ಪರಿಸರ ವ್ಯವಸ್ಥೆಯ ವ್ಯವಸ್ಥಿತ ಪುನಶ್ಚೇತನ — ರೋಗಶಾಸ್ತ್ರೀಯ, ಬೇಸಾಯ ಮತ್ತು ಪರಿಸರ ಸ್ಥಿತಿಸ್ಥಾಪಕತ್ವದ ಬಹುಶಿಸ್ತೀಯ ಚೌಕಟ್ಟು”) ಎಂಬ ಬಹುಶಿಸ್ತೀಯ ಸಂಶೋಧನಾ ಯೋಜನೆಯನ್ನೂ ಕ್ಯಾಂಪ್ಕೊ ಆರಂಭಿಸಿದೆ. ಅಡಿಕೆ ಪರಿಸರ ವ್ಯವಸ್ಥೆ ಎದುರಿಸುತ್ತಿರುವ ಹೊಸ ಸವಾಲುಗಳಿಗೆ ವೈಜ್ಞಾನಿಕ ಮತ್ತು ಬಹುಶಿಸ್ತೀಯ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.
ಸಂಸ್ಥಾಪಕರ ಜನ್ಮ ಶತಮಾನೋತ್ಸವ ಆಚರಣೆ
ಸಂಸ್ಥೆಯ ಸಂಸ್ಥಾಪಕ ಸದಸ್ಯರಾದ ದಿವಂಗತ ಶ್ರೀ ವಾರಣಾಸಿ ಸುಬ್ರಾಯ ಭಟ್ ಅವರ ಜನ್ಮ ಶತಮಾನೋತ್ಸವವನ್ನು 2026ರ ಜೂನ್ 8ರಂದು ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯಲ್ಲಿ ಆಚರಿಸಲಾಯಿತು.
ಬೆಳೆಗಾರರ ಕ್ಷೇಮ ಮತ್ತು ಸಹಕಾರಿ ಚಳವಳಿಗೆ ಅಪಾರ ಕೊಡುಗೆ ನೀಡಿ ಕ್ಯಾಂಪ್ಕೊದ ಬೆಳವಣಿಗೆಗೆ ಬುನಾದಿ ಹಾಕಿದ ದೂರದೃಷ್ಟಿಯ ಸಹಕಾರಿ ನಾಯಕರಿಗೆ ವರ್ಷಪೂರ್ತಿ ನಡೆಯಲಿರುವ ನಮನ ಕಾರ್ಯಕ್ರಮಗಳಿಗೆ “ಕ್ಯಾಂಪ್ಕೊ ಬ್ರಹ್ಮ- ಶತನಮನ” ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಲಾಂಛನವನ್ನೂ ಬಿಡುಗಡೆ ಮಾಡಲಾಯಿತು.
ಆಚರಣೆಯ ಭಾಗವಾಗಿ, ಮಂಗಳೂರು ಆಕಾಶವಾಣಿಯಲ್ಲಿ “ಕ್ಯಾಂಪ್ಕೊ ಕೃಷಿ ರಂಗ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪ್ರಖ್ಯಾತ ಕೃಷಿ ತಜ್ಞರು ಆಧುನಿಕ ಮತ್ತು ಅತ್ಯುತ್ತಮ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ, ಕ್ಯಾಂಪ್ಕೊ ಬೆಳೆಗಾರರ ಅನುಭವಗಳು ಹಾಗೂ ಯಶಸ್ಸಿನ ಗಾಥೆಗಳನ್ನು ಹಂಚಿಕೊಳ್ಳಲಾಯಿತು.
ಸದೃಢ ಸದಸ್ಯತ್ವ ಮತ್ತು ಆರ್ಥಿಕ ಬುನಾದಿ
2026ರ ಮಾರ್ಚ್ 31ರ ಅಂತ್ಯಕ್ಕೆ ಕ್ಯಾಂಪ್ಕೊದ ಒಟ್ಟು ಸದಸ್ಯತ್ವ 1,53,794 ಆಗಿದ್ದು, ಇದರಲ್ಲಿ 1,53,205 ವೈಯಕ್ತಿಕ “ಸಿ” ವರ್ಗದ ಸದಸ್ಯರು, “ಎ” ವರ್ಗದ ಷೇರು ಹೊಂದಿರುವ 584 ಸಂಘಗಳು ಮತ್ತು “ಬಿ” ವರ್ಗದ ಷೇರು ಹೊಂದಿರುವ ಐದು ಮಾರಾಟ ಮಹಾಮಂಡಲಗಳು ಸೇರಿವೆ.
ಸಂಸ್ಥೆಯ ಒಟ್ಟು ಪಾವತಿಸಿದ ಷೇರು ಬಂಡವಾಳ ₹66.27 ಕೋಟಿ ಆಗಿದೆ.
₹211.42 ಕೋಟಿ ಮೀಸಲು ನಿಧಿ ಮತ್ತು ₹334.15 ಕೋಟಿ ಇತರ ನಿಧಿಗಳು ಸೇರಿ ಒಟ್ಟು ₹545.57 ಕೋಟಿಯೊಂದಿಗೆ ಕ್ಯಾಂಪ್ಕೊದ ಆರ್ಥಿಕ ಬುನಾದಿ ಸದೃಢವಾಗಿ ಮುಂದುವರಿದಿದೆ. ಹಸಿರು ಇಂಧನ ಯೋಜನೆಗಳ ಮುಂದುವರಿಕೆ.
ಚಾಕೊಲೇಟ್ ಕಾರ್ಖಾನೆಯಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಮೂಲಕ ಪರಿಸರ ಸುಸ್ಥಿರತೆಯ ಬದ್ಧತೆಯನ್ನು ಕ್ಯಾಂಪ್ಕೊ ಬಲಪಡಿಸಿದೆ. ಅಸ್ತಿತ್ವದಲ್ಲಿರುವ ಮೂರು ಪವನ ವಿದ್ಯುತ್ ಘಟಕಗಳು 2025-26ರಲ್ಲಿ 39.40 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ/ವೀಲಿಂಗ್ ಮಾಡಿದ್ದು, ಇದು ಚಾಕೊಲೇಟ್ ಕಾರ್ಖಾನೆಯ ಒಟ್ಟು ಇಂಧನ ಅಗತ್ಯದ ಸುಮಾರು ಶೇ. 56.81ರಷ್ಟನ್ನು ಪೂರೈಸಿದೆ.
ಪುತ್ತೂರಿನ ಸಿಸಿಎಫ್‌ನಲ್ಲಿರುವ 500 ಕಿ.ವ್ಯಾ. ಸೌರ ವಿದ್ಯುತ್ ಯೋಜನೆ 4.79 ಲಕ್ಷ ಯೂನಿಟ್ ಉತ್ಪಾದಿಸಿದ್ದು, ಇದು ಕಾರ್ಖಾನೆಯ ಇಂಧನ ಅಗತ್ಯದ ಸುಮಾರು ಶೇ. 7ರಷ್ಟಾಗಿದೆ. ಮತ್ತೊಂದು 500 ಕಿ.ವ್ಯಾ. ಛಾವಣಿ ಸೌರ ಯೋಜನೆಯ ಕಾರ್ಯಾರಂಭವೂ ಪ್ರಗತಿಯಲ್ಲಿದೆ.ಹೆಚ್ಚುವರಿಯಾಗಿ 580 ಕೆ.ಡಬ್ಲ್ಯೂ ಸಾಮರ್ಥ್ಯದ ಮೇಲ್ಛಾವಣಿ ಸೌರ (ರೂಫ್‌ಟಾಪ್ ಸೋಲಾರ್) ಯೋಜನೆಯು ಪ್ರಗತಿಯಲ್ಲಿದ್ದು, ಇದು ಹೆಚ್ಚುವರಿ ಶೇ. 8-9 ರಷ್ಟು ಇಂಧನ/ವಿದ್ಯುತ್ ಬೇಡಿಕೆಯನ್ನು ಪೂರೈಸುವ ನಿರೀಕ್ಷೆಯಿದೆ. ಕ್ಯಾಂಪ್ಕೊ ‘ಮುಕ್ತ ಪ್ರವೇಶ’ದ ಮೂಲಕ ಅಂದಾಜು 15 ಲಕ್ಷ ಯುನಿಟ್ ವಿದ್ಯುತ್ ಖರೀದಿಸಲು ಸಹ ಯೋಜಿಸುತ್ತಿದೆ.
ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯಲ್ಲಿ ಶೇಖರಣಾ ಮೂಲಸೌಕರ್ಯ :
ತನ್ನ ಶೇಖರಣೆ ಮತ್ತು ದಾಸ್ತಾನು ನಿರ್ವಹಣಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಸಿದ್ಧಪಡಿಸಿದ ಉತ್ಪನ್ನಗಳಿಗಾಗಿ 450 ಮೆಟ್ರಿಕ್ ಟನ್ ಹೆಚ್ಚುವರಿ ಶೇಖರಣಾ ಸಾಮರ್ಥ್ಯದ ‘ಸ್ಟ್ಯಾಂಡರ್ಡ್ ಕೂಲ್ ರೂಮ್’ ಅನ್ನು ನಿರ್ಮಿಸಲು ಕ್ಯಾಂಪ್ಕೊ ಯೋಜಿಸುತ್ತಿದೆ.
ತೆರಿಗೆ ಇಳಿಕೆಯ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆ
ಭಾರತ ಸರ್ಕಾರ ಪ್ರಕಟಿಸಿದ ಜಿಎಸ್‌ಟಿ ದರ ಪರಿಷ್ಕರಣೆಯನ್ನು ಸ್ವಾಗತಿಸಿದ ಕ್ಯಾಂಪ್ಕೊ, ತೆರಿಗೆ ಅನುಸರಣೆಯ ಬದ್ಧತೆಯನ್ನು ಕಾಯ್ದುಕೊಳ್ಳುತ್ತಲೇ, ಪರಿಷ್ಕೃತ ದರಗಳ ಪ್ರಯೋಜನವನ್ನು ತನ್ನ ವಿತರಕರು, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ಗ್ರಾಹಕರಿಗೆ ತಕ್ಷಣವೇ ವರ್ಗಾಯಿಸಿದೆ.
ಮುಂದಿನ ಹೆಜ್ಜೆ
ರೈತ ಸೇವೆಗಳ ಬಲವರ್ಧನೆ, ಖರೀದಿ ಜಾಲದ ವಿಸ್ತರಣೆ, ಮೌಲ್ಯವರ್ಧನೆಯ ಹೆಚ್ಚಳ, ಮಾರುಕಟ್ಟೆ ವ್ಯಾಪ್ತಿಯ ಸುಧಾರಣೆ, ಡಿಜಿಟಲ್ ಸೇವೆಗಳ ಪ್ರೋತ್ಸಾಹ ಮತ್ತು ವ್ಯವಹಾರಗಳ ಸ್ಪರ್ಧಾತ್ಮಕತೆಯ ವೃದ್ಧಿಯನ್ನು ಗುರಿಯಾಗಿಸಿ 2026-27ನೇ ಸಾಲಿಗೆ ಕ್ಯಾಂಪ್ಕೊ ಹಲವು ಯೋಜನೆಗಳನ್ನು ರೂಪಿಸಿದೆ. ಸಂಸ್ಥೆ ಈ ಕೆಳಗಿನ ಅಂಶಗಳಿಗೆ ಆದ್ಯತೆ ನೀಡಲಿದೆ:
● ಅಡಿಕೆ ಖರೀದಿ ಮತ್ತು ಬೆಳೆಗಾರರಿಗೆ ಮಾರುಕಟ್ಟೆ ಬೆಂಬಲದ ಬಲವರ್ಧನೆ;
● ಶಾಖೆ ಮತ್ತು ಖರೀದಿ ಕೇಂದ್ರಗಳ ಜಾಲದ ವಿಸ್ತರಣೆ;
● ಸಕ್ರಿಯ ಸದಸ್ಯರಿಗೆ ರಿಯಾಯಿತಿ ದರದ ಕೃಷಿ ಪರಿಕರಗಳ ಮುಂದುವರಿಕೆ;
● ಬೆಳೆಗಾರ-ಸದಸ್ಯರಿಗೆ 1 ಲಕ್ಷ ಕೊಕ್ಕೊ ಸಸಿಗಳ ವಿತರಣೆ;
● ಚಾಕೊಲೇಟ್ ವಿಭಾಗದ ಬಲವರ್ಧನೆ ಮತ್ತು ಉತ್ಪಾದನಾ ದಕ್ಷತೆಯ ಸುಧಾರಣೆ;
● ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವಿಸ್ತರಣೆ;
● ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಸದಸ್ಯ ಸೇವೆಗಳ ಪ್ರೋತ್ಸಾಹ;
● ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಮೇಲಿನ ವೈಜ್ಞಾನಿಕ ಸಂಶೋಧನೆಗೆ ಬೆಂಬಲ;
● ಮಣ್ಣು ಪರೀಕ್ಷೆ ಮತ್ತು ಇತರ ರೈತಪರ ಸೇವೆಗಳ ವಿಸ್ತರಣೆ;
● ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಉತ್ಪಾದನಾ ಪದ್ಧತಿಗಳ ಬಲವರ್ಧನೆ;
● ಸದಸ್ಯ ಕ್ಷೇಮಾಭಿವೃದ್ಧಿ ಮತ್ತು ಸೌಲಭ್ಯ ಯೋಜನೆಗಳ ಮುಂದುವರಿಕೆ.
1.53 ಲಕ್ಷಕ್ಕೂ ಹೆಚ್ಚು ಬೆಳೆಗಾರ-ಸದಸ್ಯರ ಬಲಿಷ್ಠ ತಳಹದಿ, ವ್ಯಾಪಕ ಖರೀದಿ ಮತ್ತು ಮಾರಾಟ ಜಾಲ, ವೈವಿಧ್ಯಮಯ ವ್ಯವಹಾರ ಚಟುವಟಿಕೆಗಳು ಹಾಗೂ ಸದೃಢ ಆರ್ಥಿಕ ಬುನಾದಿಯೊಂದಿಗೆ, ರೈತರ ಹಿತರಕ್ಷಣೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಮೌಲ್ಯ ಪ್ರಾಪ್ತಿ ಮತ್ತು ಕೃಷಿ ಸಮುದಾಯದ ಸುಸ್ಥಿರ ಅಭಿವೃದ್ಧಿ ಎಂಬ ತನ್ನ ಮೂಲ ಸಹಕಾರಿ ಧ್ಯೇಯಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
ಸುಸ್ಥಿರ, ತಂತ್ರಜ್ಞಾನ ಚಾಲಿತ ಮತ್ತು ರೈತ ಕೇಂದ್ರಿತ ಸಹಕಾರಿಯಾಗಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವ ಕ್ಯಾಂಪ್ಕೊ, ತನ್ನ ಬೆಳವಣಿಗೆಯನ್ನು ವೃದ್ಧಿಗೊಳಿಸುವುದು ಹಾಗೂ ಬೆಳೆಗಾರ-ಸದಸ್ಯರ ಏಳಿಗೆಯನ್ನು ಉತ್ತೇಜಿಸುವುದೇ ಮೊದಲ ಆದ್ಯತೆ ಎಂದು ಪುನರುಚ್ಚರಿಸುತ್ತಿದೆ.
ಸತೀಶ್ಚಂದ್ರ ಎಸ್. ಆರ್.
ಅಧ್ಯಕ್ಷರು, ಹಾಗೂ
ಆಡಳಿತ ಮಂಡಳಿ ಸದಸ್ಯರು.

