ಸುರತ್ಕಲ್‌ : ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ಬಳಿಯ ಮಹಿಳೆಯೊಬ್ಬರನ್ನು ಕೊಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ 6 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಓರ್ವನನ್ನು ಸುರತ್ಕಲ್‌ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತನನ್ನು ರಾಜಸ್ಥಾನದ ಭರತ್‌ ಪುರ ಜಿಲ್ಲೆಯ ಭಯಾನ ತಾಲೂಕಿನ ನಿವಾಸಿ ಬಹುದ್ದೂರ್ ಸಿಂಗ್ ಯಾನೆ ಬಹುದ್ದೂರ್‌ ಯಾನೆ ಬುಯ್ಯ ಎಂದು ಪೊಲೀರು ಮಾಹಿತಿ ನೀಡಿದ್ದಾರೆ. ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿಯಾದ ಸುಮತಿ ಪ್ರಭು ಎಂಬವರನ್ನು 2014ರ ಫೆ.8ರಂದು ಆರೋಪಿಗಳಾದ ರಾಜಸ್ಥಾನದ ಭರತ್‌ ಪುರ ಜಿಲ್ಲೆಯ ಭಯಾನ ತಾಲೂಕಿನ ಬಹುದ್ದೂರ್ ಸಿಂಗ್ ಯಾನೆ ಬಹುದ್ದೂರ್‌ ಯಾನೆ ಬುಯ್ಯ, ಶಿವರಾಮ್, ಉತ್ತರ ಪ್ರದೇಶದ ಅಮರ್ಥ್ ಜಿಲ್ಲೆಯ ಶಹನ್ವಾಝ್‌ ಯಾನೆ ಶಾನು ಎಂಬಾತ ಮಹಿಳೆಯ ಕುತ್ತಿಗೆಗೆ ಚೂರಿಯಿದ ಕೊಯ್ದು ಕೊಲೆ ಮಾಡಿ ಆಕೆಯ ಮೈಮೇಲಿದ್ದ ಸುಮಾರು 3.80 ಲಕ್ಷ ರೂ. ಬಾಳುವ 192 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಪ್ರಕರಣದಲ್ಲಿ ಶಿವರಾಮ್, ಶಹನ್ವಾಝ್‌ ನನ್ನು ಈಗಾಗಲೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಆದರೆ, ಬಹುದ್ದೂರ್ ಸಿಂಗ್ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ವಾರಂಟ್‌ ಜಾರಿ ಮಾಡಿತ್ತು. ಇತ್ತೀಚೆಗೆ ಈತನ ಬಗ್ಗೆ ಮಾಹಿತಿ ಕಲೆಹಾಕಿಕೊಂಡ ಸುರತ್ಕಲ್‌ ಪೊಲೀಸರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.