ಬೆಂಗಳೂರು : ಜನವಸತಿ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಅಕ್ರಮವಾಗಿ ನಡೆಸುತ್ತಿದ್ದ ವೇಶ್ಯಾವಾಟಿಕೆಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪದ್ಮನಾಭನಗರ, ಆರ್‌ಕೆ ಲೇಔಟ್ ಹಾಗೂ ಸುಂದರನಗರ ಸೇರಿದಂತೆ ವಿವಿಧೆಡೆ ಕಾರ್ಯಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗದ ಮಹಿಳಾ ರಕ್ಷಣಾ ಘಟಕವು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ದಾಳಿಗೊಳಗಾದ ಅಡ್ಡೆಗಳಲ್ಲಿ ಆರೋಪಿಗಳು ವ್ಯವಸ್ಥಿತವಾಗಿ ಜಾಲವನ್ನು ಹೆಣೆದಿದ್ದರು. ಹೊರರಾಜ್ಯಗಳ ಮಹಿಳೆಯರನ್ನು ಕೆಲಸದ ಆಮಿಷವೊಡ್ಡಿ ಕರೆತಂದು, ನಂತರ ಅವರನ್ನು ಬಲವಂತವಾಗಿ ದಂಧೆಗೆ ತಳ್ಳುತ್ತಿದ್ದರು ಎಂಬ ಆಘಾತಕಾರಿ ವಿಷಯ ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳು ಗ್ರಾಹಕರನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು ಮತ್ತು ದೂರವಾಣಿ ಕರೆಗಳ ಮೂಲಕ ಸಂಪರ್ಕಿಸುತ್ತಿದ್ದರು. ಯಾರಿಗೂ ಸಂಶಯ ಬರದಂತೆ ಸಾಮಾನ್ಯ ಬಾಡಿಗೆ ಮನೆಗಳಲ್ಲೇ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಪೊಲೀಸರು ನಗದು ಹಣ, ಮೊಬೈಲ್ ಫೋನ್‌ಗಳು ಮತ್ತು ದಂಧೆಗೆ ಬಳಸುತ್ತಿದ್ದ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಮತ್ತು ಜ್ಞಾನಭಾರತಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ದಂಧೆಯ ಹಿಂದೆ ಇರುವ ಪ್ರಮುಖ ಕಿಂಗ್‌ಪಿನ್‌ಗಳ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ.