ಬಂಟ್ವಾಳ : ತಾಲೂಕಿನ ಕುರಿಯಾಳ ಎಂಬಲ್ಲಿ ಬಾವಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರನ್ನು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬರಿಮಾರು ನಿವಾಸಿಗಳಾದ ಪದ್ಮನಾಭ(38) ಮತ್ತು ರಾಮಣ್ಣ(48) ಗಾಯಗೊಂಡವರು. ಭಾನುವಾರ ಸಂಜೆ ಈ ಘಟನೆ ನಡೆದಿದೆ.
ಬಾವಿ ಕೆಲಸಕ್ಕೆಂದು ಬರಿಮಾರು ನಿವಾಸಿಗಳಿಬ್ಬರು ಕುರಿಯಾಳ ಗ್ರಾಮದ ಕುಕ್ಕಾಜೆಯ ಕೇಶವ ಪೂಜಾರಿ ಎಂಬವರ ಮನೆಗೆ ಆಗಮಿಸಿದ್ದರು. ಕೆಲಸ ಮುಗಿಸಿ ಮೇಲಕ್ಕೆ ಹತ್ತುವ ವೇಳೆ ಜಾರಿ ಬಿದ್ದಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.
ಬಳಿಕ ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿಗಳು ಇಬ್ಬರನ್ನೂ ಮೇಲಕ್ಕೆತ್ತುವಲ್ಲಿ ಸಫಲರಾದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ರಾಮಣ್ಣ ರವರ ಕಾಲಿಗೆ ತೀವ್ರತರದ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹರೀಶ್ ಕೆ.ಜಿ, ಸಿಬ್ಬಂದಿಗಳಾದ ಪುರುಷೋತ್ತಮ್, ಕಿರಣ್ ಕುಮಾರ್, ವಿನಯ, ವಿಜಯಕುಮಾರ್, ಧರ್ಮ ಎಂ. ಕುಕ್ಕಾಜೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

