ಮಂಗಳೂರು: ಹೊರವಲಯದಲ್ಲಿರುವ ಪಜೀರು, ಬೀಜಗುಳಿ ಎಂಬಲ್ಲಿ 25 ವರ್ಷಗಳ ಹಿಂದೆ ವಿಶ್ವ ಹಿಂದೂ ಪರಿಷತ್ನ ಒಂದು ಪ್ರಕಲ್ಪವಾಗಿ ಶುಭಾರಂಭಗೊಂಡ ಗೋವನಿತಾಶ್ರಯ ಟ್ರಸ್ಟ್ ಇದೀಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.
ಕೇವಲ ಬೆರಳೆಣಿಕೆಯಷ್ಟು ಗೋವುಗಳೊಂದಿಗೆ ಆರಂಭಗೊಂಡ ಈ ಗೋಶಾಲೆಯಲ್ಲಿ ಇಂದು 500ಕ್ಕೂ ಅಧಿಕ ಗೋವುಗಳು, ಎತ್ತುಗಳು ಹಾಗೂ ಇತರ ಜಾನುವಾರುಗಳಿಗೆ ಆಶ್ರಯ ಕಲ್ಪಿಸಿ, ಅವುಗಳ ಸಂರಕ್ಷಣೆ ಮಾಡಲಾಗುತ್ತಿದೆ.
ಗೋವುಗಳ ಅಕ್ರಮ ಸಾಗಾಟ ಹಾಗೂ ಗೋವಧೆಯಂತಹ ಅನಿಷ್ಟ ಚಟುವಟಿಕೆಗಳ ವಿರುದ್ಧ ದೃಢವಾಗಿ ನಿಂತು, ಗೋಸಂರಕ್ಷಣೆ ಮತ್ತು ಗೋಸಂವರ್ಧನೆಯ ನಿರಂತರ ಕಾಯಕದಲ್ಲಿ ಈ ಸೇವಾಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ಕಳೆದ 25 ವರ್ಷಗಳಿಂದ ಗೋವುಗಳ ರಕ್ಷಣೆ, ಪೋಷಣೆ ಹಾಗೂ ಸಂವರ್ಧನೆಯ ಮೂಲಕ ಸಮಾಜಕ್ಕೆ ಮಾದರಿಯಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.
ಈ ಹಿನ್ನೆಲೆಯಲ್ಲಿ ಗೋವನಿತಾಶ್ರಯ ಟ್ರಸ್ಟ್ನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನವೆಂಬರ್ 15, ಭಾನುವಾರ ಅಪರಾಹ್ನ 2.30ಕ್ಕೆ ಕದ್ರಿ ಶ್ರೀ ಕ್ಷೇತ್ರದಿಂದ ಪಜೀರಿನ ಗೋಶಾಲೆಗೆ “ಗೋವಿಗಾಗಿ ಹೊರೆಕಾಣಿಕೆ” ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ ಪಜೀರಿನ ಗೋಶಾಲೆಯ ಆವರಣದಲ್ಲಿ ಗೋಪೂಜೆ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ನವೆಂಬರ್ 16, ಸೋಮವಾರ ಪೂರ್ವಾಹ್ನ ಗೋಶಾಲೆಯ ಆವರಣದಲ್ಲಿ ಶ್ರೀ ಚಂಡಿಕಾಯಾಗ, ಅನ್ನಸಂತರ್ಪಣೆ ಹಾಗೂ ಅಲ್ಲಿನ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 3ರಿಂದ 5ರವರೆಗೆ “ಗೋಸಂರಕ್ಷಣೆ: ಸವಾಲುಗಳು ಹಾಗೂ ಪರಿಹಾರಗಳು” ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿದೆ.
ತದನಂತರ ಸಭಾ ಕಾರ್ಯಕ್ರಮ ಹಾಗೂ ಶಾರದಾ ವಿದ್ಯಾಸಂಸ್ಥೆಯ ವತಿಯಿಂದ “ಸಾಂಸ್ಕೃತಿಕ ಸಂಜೆ” ಕಾರ್ಯಕ್ರಮ ನಡೆಯಲಿದೆ.
ಗೋಸಂರಕ್ಷಣೆ ಮತ್ತು ಗೋಸಂವರ್ಧನೆಯ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಲು ಸಮಸ್ತ ಗೋಪ್ರೇಮಿಗಳು, ಧಾರ್ಮಿಕ ಅಭಿಮಾನಿಗಳು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಗೋವನಿತಾಶ್ರಯ ಟ್ರಸ್ಟ್ ಆತ್ಮೀಯವಾಗಿ ಆಹ್ವಾನಿಸುತ್ತದೆ.

