ಇಸ್ಲಾಮಾಬಾದ್: ಭಾರತದ ದೀಪಾವಳಿ ಸಂಭ್ರಮಾಚರಣೆಯಿಂದಾಗಿ ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಲಾಹೋರ್ ನಗರದಲ್ಲಿ ಸತತ ಎರಡನೇ ದಿನವೂ ವಾಯುಮಾಲಿನ್ಯ ಪ್ರಮಾಣ ವಿಪರೀತವಾಗಿದೆ. ಲಾಹೋರ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 263 ದಾಖಲಾಗಿದೆ. ಇದನ್ನು ಅತ್ಯಂತ ಕಳಪೆ ಎಂದಿರುವ IQAir ಸಂಸ್ಥೆ, ವಿಶ್ವದ ಪ್ರಮುಖ ನಗರಗಳ ಪೈಕಿ ಲಾಹೋರ್ ಮೊದಲ ಸ್ಥಾನದಲ್ಲಿದೆ ಎಂದಿದೆ.
ಗಾಳಿಯಲ್ಲಿನ ಮಾಲಿನ್ಯಕಾರಕ ಪಿಎಂ 2.5 ಕಣಗಳ ಸಾಂಧ್ರತೆಯು ಶ್ವಾಸಕೋಶದೊಳಗೆ ಇಳಿಯುವಷ್ಟು ಸೂಕ್ಷ್ಮ ಗಾತ್ರದಲ್ಲಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ 37.2 ಪಟ್ಟು ಹೆಚ್ಚಾಗಿದೆ ಎಂದು IQAir ಹೇಳಿದೆ.
ಭಾರತದಲ್ಲಿ ದೀಪಾವಳಿ ವೇಳೆ ವಾರಾಂತ್ಯದಲ್ಲಿ ಪಟಾಕಿ ಸಿಡಿಸಿದ ನಂತರ ಪಾಕಿಸ್ತಾನದತ್ತ ಬೀಸಿದ ಗಾಳಿಯು ಮಾಲಿನ್ಯವನ್ನು ಹೊತ್ತುತಂದಿದೆ ಎಂದು ಪಾಕ್ನ ಪಂಜಾಬ್ ಪ್ರಾಂತ್ಯದ ಪರಿಸರ ಸಂರಕ್ಷಣಾ ಸಚಿವೆ ಮರಿಯಮ್ ಔರಂಗಜೇಬ್ ಆರೋಪಿಸಿದ್ದಾರೆ.
IQAir ಸಂಸ್ಥೆಯು, ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಮಂಗಳವಾರ ಎರಡನೇ ಸ್ಥಾನ ನೀಡಿದೆ. ದೆಹಲಿಯಲ್ಲಿ ಎಕ್ಯೂಐ ಪ್ರಮಾಣ 188 ಇದೆ ಎಂದು ತಿಳಿಸಿದೆ.

