ಮಂಗಳೂರು : ರಾಜ್ಯ ಸರ್ಕಾರವು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯ ಮರುಬಳಕೆಯನ್ನು ತಡೆಯಲು ಹೊಸ ಯೋಜನೆ ರೂಪಿಸುತ್ತಿದೆ. ಈ ಯೋಜನೆಯು ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ಮಂಗಳೂರು, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ. ಬಳಸಿದ ಅಡುಗೆ ಎಣ್ಣೆಯನ್ನು ಕಂಪನಿಗಳಿಗೆ ಮಾರಾಟ ಮಾಡಲು ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಆ್ಯಪ್‌ ಮೂಲಕ ಕಂಪನಿಗಳನ್ನು ಸಂಪರ್ಕಿಸಿ ಬಳಸಿದ ಎಣ್ಣೆಯನ್ನು ಮಾರಾಟ ಮಾಡಬಹುದು.

ಈ ಎಣ್ಣೆಯನ್ನು ಖರೀದಿಸುವ ಕಂಪನಿಗಳಿಗೆ ಸರ್ಕಾರವೇ ಅನುಮತಿ ನೀಡಲಿದೆ. ಆ್ಯಪ್‌ ಮೂಲಕ ಮಾರಾಟ ಮಾಡುವುದರಿಂದ ಹೋಟೆಲ್‌ಗಳಲ್ಲಿ ಬಳಕೆಯಾಗುವ ಎಣ್ಣೆಯ ಪ್ರಮಾಣದ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಬಳಸಿದ ಎಣ್ಣೆಯನ್ನು ಮಾರಾಟ ಮಾಡುವುದರಿಂದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಹೆಚ್ಚುವರಿ ಆದಾಯ ದೊರೆಯಲಿದೆ. ಸಂಗ್ರಹಿಸಿದ ಎಣ್ಣೆಯನ್ನು ಬಯೋಡೀಸೆಲ್‌, ಏವಿಯೇಷನ್‌ ಮತ್ತು ಸೋಪು ತಯಾರಿಕಾ ಕಂಪನಿಗಳು ಉತ್ಪನ್ನಗಳ ತಯಾರಿಕೆಗೆ ಬಳಸಲಿವೆ.

ಧಾರ್ಮಿಕ ಕಾರ್ಯಗಳಲ್ಲಿ ದೀಪ ಉರಿಸಲು ಬಳಸುವ ಎಣ್ಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಏವಿಯೇಷನ್‌ ಕಂಪನಿಗಳಿಗೆ ಬಳಸಿದ ಎಣ್ಣೆ ಪೂರೈಕೆಗೆ ಅನುಕೂಲವಾಗುವಂತೆ ಆಮದು ನೀತಿಯಲ್ಲಿ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಮುಂದಿನ ಹಂತದಲ್ಲಿ ಮನೆಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನೂ ಖರೀದಿಸುವ ಯೋಜನೆ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.