ಮಂಗಳೂರು : ವೆಲೆನ್ಸಿಯಾ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಅವರನ್ನು ಎರಡನೇ ಬಾರಿಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೆರ್ಮನ್ನೂರು ಚರ್ಚ್ ನಲ್ಲಿ ಪಾದ್ರಿಯಾಗಿದ್ದ ಸಂದರ್ಭದಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎರಡನೇ ಎಫ್‌ಐಆ‌ರ್ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವೆಲೆನ್ಸಿಯಾ ಚರ್ಚ್ ನಲ್ಲಿ ಬಾಲಕನಿಗೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಇತ್ತೀಚೆಗೆ ಮಂಗಳೂರಿನ ಕೋರ್ಟ್ ಜಾಮೀನು ನೀಡಿತ್ತು. ಆದರೂ ಸಿಪ್ರಿಯನ್ ಪಿಂಟೋ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಅನಾರೋಗ್ಯ ನೆಪದಲ್ಲಿ ಬಂಧನ ಪ್ರಕ್ರಿಯೆ ಮುಂದೂಡುತ್ತ ಬಂದಿದ್ದರು.

ಇದೀಗ ಎಸಿಪಿ ನೇತೃತ್ವದಲ್ಲಿ ಪೊಲೀಸರು ಆರೋಪಿ ಸಿಪ್ರಿಯನ್ ಪಿಂಟೋನನ್ನು ಅರೆಸ್ಟ್ ಮಾಡಿದ್ದು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಆದರೆ, ನ್ಯಾಯಾಂಗ ಬಂಧನಕ್ಕೆ ಆದೇಶವಾದರೂ ಅನಾರೋಗ್ಯ ನೆಪದಲ್ಲಿ ಮತ್ತೆ ಆಸ್ಪತ್ರೆಯಲ್ಲಿ ಮಲಗುವ ಸಾಧ್ಯತೆಯೇ ಹೆಚ್ಚಿದೆ.

ಎರಡು ಪ್ರಕರಣದಲ್ಲಿಯೂ ತನಿಖೆಯನ್ನು ಎಸಿಪಿ ರವೀಶ್ ನಾಯ್ ಗೆ ವಹಿಸಲಾಗಿದೆ. ಮತ್ತೊಂದು ಪೋಕೋ ಕೇಸು ದಾಖಲಾಗಿರುವುದರಿಂದ ಎರಡನೇ ಬಾರಿ ಬಂಧನ ಮಾಡಲೇಬೇಕಾದ ಅನಿವಾರ್ಯತೆ ಪೊಲೀಸರಿಗಿತ್ತು. ಪೊಲೀಸರು ತಮ್ಮ ಕಾರ್ಯ ನೆರವೇರಿಸಿದ್ದಾರೆ. ಆದರೆ ಮೊದಲ ಪ್ರಕರಣದಲ್ಲಿಯೂ ಪೊಲೀಸ್ ಕಸ್ಟಡಿ ಕೇಳದ ಪೊಲೀಸರು ಈ ಬಾರಿಯೂ ನಿರ್ಲಕ್ಷ್ಯ ವಹಿಸಿದರೆ ಉದ್ದೇಶಪೂರ್ವಕ ವಿಳಂಬ ನೀತಿ ತೋರುತ್ತಿದ್ದಾರೆ ಎನ್ನಬೇಕಷ್ಟೆ.