ಮಂಗಳೂರು: ಪ್ರೀತಿ ಅನ್ನೋದು ಬದುಕಿಗೆ ದಾರಿಯಾಗಬೇಕಿತ್ತು, ಆದರೆ ಇಲ್ಲೊಬ್ಬ ಯುವಕನ ಪಾಲಿಗೆ ಅದೇ ಪ್ರೀತಿ ಮರಣಶಾಸನವಾಗಿದೆ. ಪ್ರೀತಿಸಿದ ಹುಡುಗಿಯ ಮಾನಸಿಕ ಕಿರುಕುಳ ತಾಳಲಾರದೆ 22 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ 22 ವರ್ಷದ ಮುಹಮ್ಮದ್ ಆಶಿಕ್, ಕಳೆದ ಮಾರ್ಚ್ 21ರ ಮಧ್ಯರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆರಂಭದಲ್ಲಿ ಈ ಸಾವಿಗೆ ನಿಖರ ಕಾರಣ ತಿಳಿದಿರಲಿಲ್ಲ. ಆದರೆ ಆಶಿಕ್‌ನ ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಸತ್ಯವೊಂದು ಹೊರಬಿದ್ದಿದೆ.
ಆಶಿಕ್ ನಗರದ ಕೂಳೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ಅದೇ ಕಾಲೇಜಿನ ಉಳ್ಳಾಲ ನಿವಾಸಿ ಸಮೀಯ ಸಬಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಅನ್ಯೋನ್ಯ ಬಾಂಧವ್ಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಬಾ ಆಶಿಕ್‌ನಿಂದ ದೂರವಾಗತೊಡಗಿದ್ದಳು ಎನ್ನಲಾಗಿದೆ. ಕೇವಲ ದೂರವಾಗುವುದು ಮಾತ್ರವಲ್ಲದೆ, ಆತನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂಬ ಗಂಭೀರ ಆರೋಪವನ್ನೂ ಆಶಿಕ್ ಮನೆಯವರು ಮಾಡಿದ್ದಾರೆ.
ಇನ್ನೂ ಆಶಿಕ್ ತಂದೆ ಮುಹಮ್ಮದ್ ಹನೀಫ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಬಾಳ ಕಿರುಕುಳವೇ ತನ್ನ ಮಗನ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ. “ನೀನು ಎಲ್ಲಿಯಾದರೂ ಹೋಗಿ ಸಾಯಿ” ಎಂದು ಹೇಳುವುದಲ್ಲದೇ, ಸಬಾ ಸದಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಅಷ್ಟೇ ಅಲ್ಲದೆ, ಆಶಿಕ್ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲೂ ಸಬಾ ಆತನೊಂದಿಗೆ ವೀಡಿಯೋ ಕಾಲ್‌ನಲ್ಲಿದ್ದಳು ಮತ್ತು ಅವಳೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಬಾ ತನ್ನ ಮಗನೊಂದಿಗೆ ಪ್ರೀತಿಯ ನಾಟಕವಾಡಿ, ಆತನಿಂದ ಹಣ ಖರ್ಚು ಮಾಡಿಸಿ, ಕೊನೆಗೆ ಆತನನ್ನು ಸಾವಿನ ದೂಡಿದ್ದಾಳೆ ಎಂದು ಆಶಿಕ್ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಶಿಕ್ ಆಕೆಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ ಎಂದು ಆತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಸದ್ಯ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ವೀಡಿಯೋ ಕಾಲ್‌ನಲ್ಲಿದ್ದ ದಾಖಲೆಗಳು ಮತ್ತು ಮೊಬೈಲ್ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದೆ.

