ಬಂಟ್ವಾಳ : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಳೆಮಾಪನ ಕೇಂದ್ರಗಳ ದುರವಸ್ಥೆಯಿಂದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪರಿಹಾರ ವಿತರಣೆಯಲ್ಲಿ ಗಂಭೀರ ಗೊಂದಲ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಗ್ರಾ.ಪಂ.ಗಳ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಲು ಸರ್ಕಾರ ಗಮನ ಹರಿಸಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ತೋಟಗಾರಿಕಾ ಸಚಿವರಿಗೆ ಪತ್ರಬರೆದಿದ್ದಾರೆ.
2024-25ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಪ್ರೀಮಿಯಂ ಪಾವತಿಸಿದ ಅನೇಕ ರೈತರಿಗೆ ಸಮರ್ಪಕ ಪರಿಹಾರ ದೊರೆಯದಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣದ ಆಧಾರದ ಮೇಲೆ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಆದರೆ, ಹಲವಾರು ಗ್ರಾಮ ಪಂಚಾಯತ್ಗಳಲ್ಲಿ ಮಳೆಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದೇ ದುಸ್ಥಿತಿಯಲ್ಲಿ ಇರುವುದಾಗಿ ತಿಳಿದುಬಂದಿದೆ. ಇದರ ಪರಿಣಾಮವಾಗಿ ಕರಾವಳಿ ಭಾಗದ ಕೆಲ ತಾಲೂಕುಗಳಲ್ಲಿ ರೈತರು ಪಾವತಿಸಿದ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ಪಡೆದಿದ್ದಾರೆ. ಇದರಿಂದ ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ನಲ್ಲಿರುವ ಮಳೆಮಾಪನ ಕೇಂದ್ರಗಳನ್ನು ಪಂಚಾಯತ್ ಮಟ್ಟದ ಕಂದಾಯ ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರತಿಮಾಸ ಪರಿಶೀಲನೆ ನಡೆಸಿ ಸುಸ್ಥಿತಿಯಲ್ಲಿ ಇಡುವಂತೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಭು ಪತ್ರದಲ್ಲಿ ಆಗ್ರಹಿಸಿದ್ದಾರೆ.

