ಮಂಗಳೂರು: ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆಯಲ್ಲಿ ಮಾನವೀಯತೆ ಸಹನೆ ಮತ್ತು ಕರುಣೆಯ ಅಪೂರ್ವ ನಿದರ್ಶನಕ್ಕೆ ಸಾಕ್ಷಿಯಾಯಿತು. ಮಂಗಳೂರು ಉಳ್ಳಾಲ ತಾಲೂಕಿನ ಕುತ್ತಾರುಪದವು ನಿವಾಸಿ 21 ವರ್ಷದ ಶ್ರೀ ವರ್ಷಿತ್ ಅವರ ಕುಟುಂಬವು ದುಃಖದ ನಡುವೆಯೂ ಅತ್ಯಂತ ಸಹನೆಯ ನಿರ್ಧಾರ ಕೈಗೊಂಡು, ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ದರಿಸಿದರು. ಈ ಮೂಲಕ ಹಲವು ರೋಗಿಗಳಿಗೆ ಜೀವದಾನ ನೀಡುವ ಮಹತ್ವದ ಕಾರ್ಯಕ್ಕೆ ಕುಟುಂಬವು ಕೈಜೋಡಿಸಿದೆ.
ಶ್ರೀ ವರ್ಷಿತ್ ಅವರು 14 ಸೆಪ್ಟೆಂಬರ್ 2026 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ತಲೆಗೆ ಗಾಯಗೊಂಡ ಹಿನ್ನೆಲೆಯಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಕೃತಕ ಶ್ವಾಸ ಯಂತ್ರದ ಸಹಾಯ ನೀಡಲಾಗಿತ್ತು. ಚಿಕಿತ್ಸಾ ತಂಡವು ಅತ್ಯುತ್ತಮ ವೈದ್ಯಕೀಯ ಪ್ರಯತ್ನಗಳನ್ನು ನಡೆಸಿದರೂ, ಅವರ ಮೆದುಳು ನಿಷ್ಕೀಯವಾಗುವುದನ್ನು ತಡೆಯಲಾಗಲಿಲ್ಲ. ನಿಗದಿತ ವೈದ್ಯಕೀಯ ಮೌಲ್ಯಮಾಪನ ಮತ್ತು ಪ್ರೋಟೋಕಾಲ್ಗಳ ಅನುಸಾರವಾಗಿ ಅವರನ್ನು ಮಿದುಳು ನಿಷ್ಕೀಯರು ಎಂದು ಘೋಷಿಸಲಾಯಿತು.
ಚಿಕಿತ್ಸಾ ತಂಡವು ಮಿದುಳು ನಿಷ್ಕೀಯುವನ್ನು ದೃಢಪಡಿಸಿದ ನಂತರ ಮಿದುಳಿನ ನಿಷ್ಕಿಯತೆ ಹಾಗೂ ಅಂಗಾಂಗ ದಾನದ ಸಾಧ್ಯತೆ ಕುರಿತು ಟ್ರಾನ್ಸ್ಪ್ಲಾಂಟ್ ಸಂಯೋಜಕರು ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದರು. ಈ ಅತ್ಯಂತ ದುಃಖದ ಸಂದರ್ಭದಲ್ಲಿ ಕುಟುಂಬವು ಅಪಾರ ಧೈರ್ಯ ಮತ್ತು ನಿಸ್ವಾರ್ಥ ಮನೋಭಾವವನ್ನು ಪ್ರದರ್ಶಿಸಿ ಅಂಗಾಂಗ ದಾನಕ್ಕೆ ನಿರ್ದರಿಸಿದರು. ತಮ್ಮ ಅಪಾರ ನಷ್ಟವನ್ನು ಇತರರ ಬದುಕನ್ನು ಉಳಿಸುವ ಹಾಗೂ ಸುಧಾರಿಸುವ ಅವಕಾಶವಾಗಿ ಪರಿವರ್ತಿಸಿದ ಕುಟುಂಬದ ಈ ನಿರ್ಧಾರ ಶ್ಲಾಘನೀಯವಾಗಿದೆ.
ಅಂಗಾಂಗ ದಾನದ ಸಂಪೂರ್ಣ ಪ್ರಕ್ರಿಯೆಯನ್ನು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಂಗಾಂಗ ಕಸಿ ಸಮನ್ವಯ ತಂಡವು ಜೀವ ಸಾರ್ಥಕತೆ ಸಂಸ್ಥೆಯ ಸಹಯೋಗದೊಂದಿಗೆ ಸಂಯೋಜಿಸಿತು. ಅಂಗಾಂಗಗಳ ಸಂಗ್ರಹಣಾ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಹಾಗೂ ನಿಗದಿತ ವೈದ್ಯಕೀಯ, ಕಾನೂನು ಮತ್ತ ಆಡಳಿತಾತ್ಮಕ ಪ್ರೋಟೋಕಾಲ್ಗಳ ಅನುಸಾರವಾಗಿ ನಡೆಸಲು ಅಗತ್ಯವಿರುವ ಎಲ್ಲಾ ವೈದ್ಯಕೀಯ, ಕಾನೂನು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳನ್ನು ಕೈಗೊಳ್ಳಲಾಯಿತು.
16 ಸೆಪ್ಟೆಂಬರ್ 2026 ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಂಗಾಂಗ ಸಂಗ್ರಹಣಾ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರೆವೇರಿಸಲಾಯಿತು. ಕಿಮ್ಸ್ ಆಸ್ಪತ್ರೆ ಇಲೆಕ್ಟ್ರೋನಿಕ್ ಸಿಟಿ ಬೆಂಗಳೂರು, ಮಣಿಪಾಲ್ ಆಸ್ಪತ್ರೆ ಬೆಂಗಳೂರು ಹಾಗೂ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಮರ್ಪಿತ ಅಂಗಾಂಗ ಸಂಗ್ರಹಣಾ ತಂಡಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಶ್ರೀ ವರ್ಷಿತ್ ಅವರ ಕುಟುಂಬದ ನಿಸ್ವಾರ್ಥ ನಿರ್ಧಾರದ ಫಲವಾಗಿ ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳು ಯಶಸ್ವಿಯಾಗಿ ಸಂಗ್ರಹಿಸಲ್ಪಟ್ಟು ಕಸಿ ಚಿಕಿತ್ಸೆಗಾಗಿ ಈ ಕೆಳಗಿನ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ.
• ಶ್ವಾಸಕೋಶಗಳು : ಕಿಮ್ಸ್ ಆಸ್ಪತ್ರೆ ಇಲೆಕ್ಟ್ರೋನಿಕ್ ಸಿಟಿ ಬೆಂಗಳೂರು.
• ಯಕೃತ್ : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಣಿಪಾಲ, ಉಡುಪಿ ಜಿಲ್ಲೆ
• ಬಲ ಮೂತ್ರಪಿಂಡ : ಎ ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ಮಂಗಳೂರು.
• ಎಡ ಮೂತ್ರಪಿಂಡ : ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಮಂಗಳೂರು.
ಶ್ವಾಸಕೋಶ ಮತ್ತು ಯಕೃತ್ತಿನ ಸಂಗ್ರಹಣೆ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಂಸ್ಥೆಯಲ್ಲಿ ಮೊದಲ ಬಾರಿಗೆ ಶ್ವಾಸಕೋಶ ಮತ್ತು ಯಕೃತ್ತಿನ ಅಂಗಾಂಗ ಸಂಗ್ರಹಣೆ ಯಶಸ್ವಿಯಾಗಿ ನೆರವೇರಿದೆ.
ಸಂಗ್ರಹಿಸಲಾದ ಅಂಗಾಂಗಗಳನ್ನು ಸಂಬಂಧಿತ ಕಸಿ ಆಸ್ಪತ್ರೆಗಳಿಗೆ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಸಾಗಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸಂಪೂರ್ಣ ಪೊಲೀಸ್ ತಂಡದ ಸಹಕಾರದೊಂದಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಯಿತು. ಇದರ ಮೂಲಕ ಅಮೂಲ್ಯವಾದ ಅಂಗಾಂಗಗಳನ್ನು ನಿಗದಿತ ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವುದು ಸಾಧ್ಯವಾಯಿತು.
ಶ್ರೀ ವರ್ಷಿತ್ ಅವರ ನಿಸ್ವಾರ್ಥ ಅಂಗಾಂಗ ದಾನಕ್ಕೆ ಗೌರವ ಸೂಚಿಸುವ ಸಲುವಾಗಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗಾರ್ಡ್ ಆಫ್ ಆನರ್ ಆಯೋಜಿಸಲಾಯಿತು. ಈ ಗೌರವ ಶ್ರೀ ವರ್ಷಿತ್ ಅವರಿ ಅಲ್ಲದೆ, ಅಪಾರ ದುಃಖದ ನಡುವೆಯೂ ಧೈರ್ಯ ಮತ್ತು ಉದಾರತೆಯನ್ನು ಪ್ರದರ್ಶಿಸಿ ಅಂಗಾಂಗ ದಾನಕ್ಕೆ ನಿರ್ದರಿಸಿದ ಅವರ ಕುಟುಂಬಕ್ಕೂ ಸಲ್ಲಿಸಲಾಯಿತು. ಅವರ ನಿರ್ಧಾರದ ಮೂಲಕ ಶ್ರೀ ವರ್ಷಿತ್ ಅವರ ನೆನಪು ಇತರರ ಬದುಕಿನಲ್ಲಿ ಮುಂದುವರಿಯಲಿದೆ.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಶ್ರೀ ವರ್ಷಿತ್ ಅವರ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಆಳವಾದ ಗೌರವವನ್ನು ವ್ಯಕ್ತಪಡಿಸುತ್ತದೆ. ಅಪಾರ ದುಃಖದ ಸಮಯದಲ್ಲಿ ಅವರು ತೋರಿದ ಅಸಾಧಾರಣ ಧೈರ್ಯ ಮತ್ತು ನಿಸ್ವಾರ್ಥ ನಿರ್ಧಾರವು ಅಂಗಾಂಗ ದಾನವು ಹೇಗೆ ಒಂದು ದುರಂತವನ್ನು ಆಶಾಕಿರಣವನ್ನಾಗಿ ಪರಿವರ್ತಿಸಬಹುದು ಮತ್ತು ಇತರರಿಗೆ ಜೀವನದ ಎರಡನೇ ಅವಕಾಶವನ್ನು ನೀಡಬಹುದು ಎಂಬುದಕ್ಕೆ ಪ್ರಬಲ ಉದಾಹರಣೆಯಾಗಿದೆ.
ಈ ನಿಸ್ವಾರ್ಥ ಕಾರ್ಯದ ಮೂಲಕ ಶ್ರೀ ವರ್ಷಿತ್ ಅವರ ಪರಂಪರೆ ಅವರು ಉಳಿಸಲು ನೆರವಾದ ಜೀವಗಳ ಮೂಲಕ ಸದಾ ಜೀವಂತವಾಗಿರಲಿದೆ “ಒಂದು ಜೀವ ಕಳೆದುಹೋಯಿತು, ಆದರೆ ಒಂದು ಅಮರ ಪರಂಪರೆ ಉಳಿಯಿತು”

