ಮಂಗಳೂರು: ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ–2026ರ ಅಂಗವಾಗಿ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ, ನರಿಂಗಾನ, ದೇರಳಕಟ್ಟೆ, ಮಂಗಳೂರು ಹಾಗೂ ಜ್ಞಾನೋದಯ ಸಮಾಜ (ರಿ.), ದೈಗೋಳಿ ಇವರ ಸಹಯೋಗದಲ್ಲಿ ಉಚಿತ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ಶಿಬಿರವನ್ನು ದೈಗೋಳಿಯ ಶ್ರೀ ಗಣೇಶ ಮಂದಿರದಲ್ಲಿ ಆಯೋಜಿಸಲಾಯಿತು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಯೋಜಿಸಲಾದ ಈ ಶಿಬಿರವು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಡೆಯಿತು. ಶಿಬಿರದಲ್ಲಿ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣೆಗಳು ಹಾಗೂ ಉಚಿತ ಆರೋಗ್ಯ ಸಲಹೆ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲಾಯಿತು.

ಶಿಬಿರದ ಅಂಗವಾಗಿ ರಕ್ತದೊತ್ತಡ ತಪಾಸಣೆ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ತಪಾಸಣೆ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು. ಇದರೊಂದಿಗೆ ಸಾಮಾನ್ಯ ವೈದ್ಯಕೀಯ ಸಲಹೆ, ಆಹಾರ ಮತ್ತು ಪೌಷ್ಟಿಕ ಸಲಹೆ, ಮಸಾಜ್ ಚಿಕಿತ್ಸೆ, ಆಕ್ಯುಪ್ರೆಷರ್ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆ ಮತ್ತು ಮಾರ್ಗದರ್ಶನವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.

ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಯೋಗದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು. ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಯ ಅಂಗವಾಗಿ ಆರೋಗ್ಯ ಮತ್ತು ಪೌಷ್ಟಿಕತೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಸಂಗೀತಲಕ್ಷ್ಮಿ ಎಂ.ಜೆ., ವೈದ್ಯಾಧಿಕಾರಿ, ಡಾ. ವಿನಯ ಕುಮಾರ ಟಿ., ವೈದ್ಯಾಧಿಕಾರಿ ಹಾಗೂ ಡಾ. ಅಜಿತ್ ಕೆ., ಆಹಾರ ಮತ್ತು ಪೌಷ್ಟಿಕ ಸಲಹೆಗಾರ ಅವರ ನೇತೃತ್ವದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು. ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶಿಬಿರದ ಆಯೋಜನೆ ಹಾಗೂ ಆರೋಗ್ಯ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
“ಆರೋಗ್ಯವೇ ಮಹಾಭಾಗ್ಯ – ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ” ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕಾರ್ಯಕ್ರಮದ ಮೂಲಕ ಕರೆ ನೀಡಲಾಯಿತು.

