ಬೆಂಗಳೂರು: ಭಾರತೀಯ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಹಾಗೂ ಸಿಂಗಾಪುರ ಮೂಲದ ಬಹುಭಾಷಾ ಹಿನ್ನೆಲೆಯ ಗಾಯಕಿ ಡಾ. ಪ್ರಿಯದರ್ಶಿನಿ ಅವರು ಕನ್ನಡ ಸಂಗೀತವನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಾರೆ. ಅಮೆರಿಕದ ಟೆನ್ನೆಸ್ಸೀ ರಾಜ್ಯದ, ‘ವಿಶ್ವದ ಸಂಗೀತದ ರಾಜಧಾನಿ’ ಎಂದೇ ಪ್ರಸಿದ್ದಿಯಾಗಿರುವ ನ್ಯಾಶ್ ವಿಲ್ನಲ್ಲಿ, ವಿಶ್ವವಿಖ್ಯಾತ “ಗ್ರ್ಯಾಂಡ್ ಓಲೆ ಓಪ್ರಿ” ವೇದಿಕೆಯಲ್ಲಿ ಅದ್ದೂರಿಯಾಗಿ ನಡೆದ 12ನೇ ವಾರ್ಷಿಕ ಜೋಸಿ ಮ್ಯೂಸಿಕ್ ಅವಾರ್ಡ್ನಲ್ಲಿ ಇವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಮಹೇಶ್ ಮಹದೇವ್ ಅವರ ‘ಅರ್ಥಪೂರ್ಣ ಸಾಹಿತ್ಯ, ಮನಮೋಹಕ ಸಂಗೀತ ಸಂಯೋಜನೆ ಹಾಗೂ ಸೃಜನಶೀಲ ನಿರ್ದೇಶನದಲ್ಲಿ’ ಮೂಡಿಬಂದ ‘ಜೈ ಶಿವಾಜಿ ಜೈ ಭವಾನಿ’ ಗೀತೆಗೆ ಈ ಅಂತರರಾಷ್ಟ್ರೀಯ ಗೌರವ ಸಂದಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ, ಶೌರ್ಯ, ಅದರ್ಶ ಹಾಗೂ ಪರಂಪರೆಯನ್ನು ಸಮಕಾಲೀನ ಸಂಗೀತ ಮತ್ತು ಸಿನಿಮೀಯ ಕಥನದ ಮೂಲಕ ಕಟ್ಟಿಕೊಡುವ ಈ ಗೀತೆ, ನೃತ್ಯಾಧಾರಿತ ಹಾಗೂ ಲಯಬದ್ಧ ನಿರೂಪಣೆಯೊಂದಿಗೆ ಗಮನ ಸೆಳೆಯುತ್ತದೆ. ಗೀತೆಗೆ ಪ್ರಿಯದರ್ಶಿನಿ ಹಾಗೂ ಮಹೇಶ್ ಮಹದೇವ್ ಅವರು ಧ್ವನಿಯಾಗಿದ್ದು, ಸಿದ್ದಾರ್ಥ್ ಶಾಂಡಿಲ್ಯಾಸ ಅವರ ಸಹಗಾಯನ ಗೀತೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಹಾಡನ್ನು ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಸದ್ಯಕ್ಕೆ ಇದರ ಕನ್ನಡ ಅವೃತ್ತಿ ಮಾತ್ರ ಬಿಡುಗಡೆಯಾಗಿದೆ. ಗೀತೆಯ ಸಂಗೀತ ವಿಡಿಯೋದಲ್ಲಿ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಹಾಗೂ ಖ್ಯಾತ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ಕರ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಶಿವಶಕ್ತಿ ಗ್ರೂಪ್ ಈ ಸಂಗೀತ ವಿಡಿಯೋವನ್ನು ತಯಾರಿಸಿದ್ದು, ಪಿ.ಎಂ. ಅಡಿಯೋನ್ ಮತ್ತು ಎಂಟರ್ಟೈನ್ಮೆಂಟ್ಸ್ ಪ್ರಸ್ತುತಪಡಿಸಿದೆ. ಬೆಂಗಳೂರಿನ ಪ್ರಿಸಮ್ ರೆಕಾರ್ಡಿಂಗ್ ಸ್ಟುಡಿಯೊನ್ನಲ್ಲಿ ಹಾಡಿನ ರೆಕಾರ್ಡಿಂಗ್, ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ನಡೆದಿದ್ದು, ಸುನಿಲ್ ಮಹದೇವ್ ಅವರು ಗ್ರಾಫಿಕ್ಸ್ ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿಯ ಅಂಗವಾಗಿ ಈ ವರ್ಷದ ಆರಂಭದಲ್ಲಿ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು ಹಾಡನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಕರ್ನಾಟಕ ಸರ್ಕಾರ ಆಯೋಜಿಸಿದ್ದ ಅಧಿಕೃತ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಈ ಸಂಗೀತ ವಿಡಿಯೋವನ್ನು ವಿಶೇಷವಾಗಿ ಪ್ರದರ್ಶಿಸಲಾಗಿತ್ತು.

ಈ ವರ್ಷದ ಜೋಸಿ ಮ್ಯೂಸಿಕ್ ಅವಾರ್ಡ್ಸ್ ಗೆ ವಿಶ್ವದಾದ್ಯಂತದ ಕಲಾವಿದರಿಂದ 1,01,000ಕ್ಕೂ ಅಧಿಕ ಸಲ್ಲಿಕೆಗಳು ಬಂದಿದ್ದವು. ಗೀತೆಯ ಸೃಜನಶೀಲತೆ, ಸಾಹಿತ್ಯದ ಗುಣಮಟ್ಟ, ವೈಶಿಷ್ಟ್ಯತೆ ಹಾಗೂ ಸಂಗೀತ ಕ್ಷೇತ್ರದಲ್ಲಿನ ಕಲಾತ್ಮಕ ಸಾಧನೆ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಿ, ಸಂಗೀತ ಕ್ಷೇತ್ರದ ಅನುಭವಿ ವೃತ್ತಿಪರರು ಹಾಗೂ ಗ್ರಾಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು ಸೇರಿದಂತೆ ತೀರ್ಪುಗಾರರ ತಂಡ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜಾಗತಿಕ ಸಲ್ಲಿಕೆಗಳ ಪೈಕಿ ಕನ್ನಡದಲ್ಲಿ ಮೂಡಿಬಂದ ‘ಜೈ ಶಿವಾಜಿ ಪೈ ಭವಾನಿ’ ಗೀತೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡ ಸಂಗೀತ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಮಹೇಶ್ ಮಹದೇವ್ ಮಾತನಾಡಿ, “ಇದು ನಮ್ಮಿಬ್ಬರಿಗೂ ದೊರೆತ 3ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಜೋಸಿ ಮ್ಯೂಸಿಕ್ ಅವಾರ್ಡ್ಸ್ನಿಂದ ದೊರೆತ ಮೊದಲ ಪ್ರಶಸ್ತಿ, ಕಲಾವಿದರಿಗೆ ಇಂತಹ ಪ್ರತಿಷ್ಠಿತ ಅಂತರರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸಿರುವ ಜೋಸಿ ಪಸಾಂಟಿನೋ ಮತ್ತು ಟಿನಾಮೇರಿ ಪಸಾಂಟಿನೋ ಅವರಿಗೆ ಹೃತೂರ್ವಕ ಕೃತಜ್ಞತೆಗಳು. ನನ್ನ ಮಾತೃಭಾಷೆ ಮರಾಠಿಯಾದರೂ, ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಕರ್ನಾಟಕವೇ ನನ್ನ ಮಾತೃಭೂಮಿ. ಕನ್ನಡದಲ್ಲಿ ಹಲವಾರು ಸಾಹಿತ್ಯಗಳನ್ನು ಬರೆದು, ಅನೇಕ ಗೀತೆಗಳನ್ನು ರಚಿಸಿದ್ದೇನೆ. ಇದೀಗ ಕನ್ನಡದಲ್ಲಿ ರಚಿಸಿರುವ ಈ ಗೀತೆಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆತಿರುವುದು ನನಗೆ ಅಪಾರ ಹೆಮ್ಮೆ ಹಾಗೂ ಆತ್ಮತೃಪ್ತಿ ತಂದಿದೆ,” ಎಂದು ಹೇಳಿದರು.
ಪ್ರಿಯದರ್ಶಿನಿ ಮಾತನಾಡಿ, ‘ನಮ್ಮ ಸಾಂಸ್ಕೃತಿಕ ಕಥನಗಳಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ದೊರೆತಿರುವುದು ಈ ಗೌರವದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ವಿವಿಧ ಭಾಷೆ, ಸಂಸ್ಕೃತಿ ಹಾಗೂ ಸಂಗೀತ ಪರಂಪರೆಗಳಿಗೆ ಸೇರಿದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಿರುವ ಜೋಸಿ ಮ್ಯೂಸಿಕ್ ಸಂಸ್ಥೆಗೆ ನಾನು ಕೃತಜ್ಞಳಾಗಿದ್ದೇನೆ.
ಕನ್ನಡನಾಡಿನ ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಗೀತದ ಮೂಲಕ ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ನಮ್ಮ ಪ್ರಯತ್ನಕ್ಕೆ ಈ ಗೌರವ ಮತ್ತಷ್ಟು ಪ್ರೋತ್ಸಾಹ ನೀಡಿದೆ,” ಎಂದು ಹೇಳಿದರು.
2026ರ ಜೋಸಿ ಮ್ಯೂಸಿಕ್ ಅವಾರ್ಡ್ಸ್ನಲ್ಲಿ ಪ್ರಿಯದರ್ಶಿನಿ ಅವರು ‘World Artist of the Year’ ಸೇರಿದಂತೆ ಒಟ್ಟು ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದರು. ಪಿ.ಎಂ ಅಡಿಯೋಸ್ ಅಂಡ್ ಎಂಟರ್ಟೈನ್ವೆಂಟ್ಸ್ ಸಂಸ್ಥೆಯೂ Record Label of the Year’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು.
ಭಾರತೀಯ ಹಾಗೂ ಸಿಂಗಾಪುರದ ಕಲಾವಿದರ ಸಹಯೋಗದಲ್ಲಿ ಮೂಡಿಬಂದ ಕನ್ನಡದ ‘ಜೈ ಶಿವಾಜಿ ಜೈ ಭವಾನಿ’ ಗೀತೆಗೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಈ ಗೌರವವು ಕನ್ನಡ ಸಂಗೀತದ ಅಂತರರಾಷ್ಟ್ರೀಯ ಪ್ರಾತಿನಿಧ್ಯಕ್ಕೆ ಮಹತ್ವದ ಮಾನ್ಯತೆಯಾಗಿದೆ. ಇದೇ ವೇಳೆ, ಭಾರತ ಮತ್ತು ಸಿಂಗಾಪುರದ ಕಲಾವಿದರ ಸೃಜನಾತ್ಮಕ ಸಹಯೋಗಕ್ಕೂ ಇದು ಗಮನಾರ್ಹ ಅಂತರರಾಷ್ಟ್ರೀಯ ಮನ್ನಣೆಯಾಗಿದೆ.

