ಮಂಗಳೂರು : ನಗರದ ಶೈಕ್ಷಣಿಕ ವಲಯ ಹಾಗೂ ಯುವ ಸಮೂಹವನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅರು ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಕೊಟೇಶ್ವರ ನಿವಾಸಿ, ಪ್ರಸ್ತುತ ಮಂಗಳೂರಿನ ಪಾಂಡೇಶ್ವರದಲ್ಲಿ ವಾಸವಿರುವ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಮಂಗಳೂರಿನ ಬಲ್ಮಠ ನಿವಾಸಿ ಮಕ್ಸದ್ ನಾಗ್ (23), ಉಡುಪಿ ಜಿಲ್ಲೆಯ ಕೊಟೇಶ್ವರ ಮೂಲದವನಾಗಿದ್ದು ಪಾಂಡೇಶ್ವರದಲ್ಲಿ ನೆಲೆಸಿರುವ ಅಹಮ್ಮದ್ ಅಲಿ ಅರ್ವಾನ್ (22) ಮತ್ತು ಕೇರಳ ರಾಜ್ಯದ ಕೊಟ್ಟಾಯಂ ನಿವಾಸಿ ಫೆಲಿಕ್ಸ್ ಪಿ. ಜೊಸೆಫ್ (20) ಹಾಗೂ ಇನ್ನೊಂದು ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಕಂಕನಾಡಿ ನಿವಾಸಿ ಎಡಲ್ ರೋಚ್ (33) ಮತ್ತು ಮಂಗಳೂರಿನ ಮಲ್ಲಿಕಟ್ಟೆ ಕದ್ರಿ ನಿವಾಸಿ ಆರೋನ್ ವಿಶಾಲ್ ಲಾಸ್ರಾದೋ (18) ಬಂಧಿತ ಆರೋಪಿಗಳು.

ಈ ಎಲ್ಲಾ ಆರೋಪಿಗಳು ಬೆಂಗಳೂರು ಮತ್ತು ಮುಂಬೈ ಮೂಲಕ ಮಾದಕ ವಸ್ತುಗಳನ್ನು ಮಂಗಳೂರಿಗೆ ತಂದು, ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಂದ 53.87 ಗ್ರಾಂ ಎಂಡಿಎಂಎ (MDMA), ಸುಮಾರು 163 ಗ್ರಾಂ ಹೈಡೋವೀಡ್ ಗಾಂಜಾ ಮತ್ತು 1 ಕೆಜಿ 155 ಗ್ರಾಂ ಸಾಮಾನ್ಯ ಗಾಂಜಾ, ಒಂದು ಐಷಾರಾಮಿ MG Hector ಕಾರು ಮತ್ತು ಒಂದು Maruti Swift ಕಾರನ್ನು ವಶಪಡಿಸಲಾಗಿದೆ.

ದಿನಾಂಕ 04-03-2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ರಸ್ತೆಯ ‘ಕ್ಲಾಸಿಕ್ ಕಂಫರ್ಟ್ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ರೂಮ್ ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದರು. ಅದೇ ದಿನ ಮತ್ತೊಂದು ಕಾರ್ಯಾಚರಣೆಯಲ್ಲಿ, ಬಂದರ್ ಬಳಿಯ ಗ್ರೀನ್ ಪಾರ್ಕ್ ಮೈದಾನದಲ್ಲಿ ಸ್ವಿಫ್ಟ್ ಕಾರಿನಲ್ಲಿ ಕುಳಿತು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಡಲ್ ರೋಚ್ ಮತ್ತು ಆರೋನ್ ವಿಶಾಲ್‌ನನ್ನು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

https://www.instagram.com/reel/DVgP4ySiKvr/?utm_source=ig_web_copy_link&igsh=MzRlODBiNWFlZA==