ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್​​​ ಮಂಡಿಸಿದ್ದು, ಕರಾವಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಬಜೆಟ್​​​ ಆರಂಭದಲ್ಲಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.

ರಾಜ್ಯದ ಅತಿ ಹೆಚ್ಚು ಆದಾಯ ತರುವ ಹಾಗೂ ಲಕ್ಷಾಂತರ ಭಕ್ತರು ಭೇಟಿ ನೀಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಿಸಲಾದ ಈ ಪ್ರಾಧಿಕಾರಗಳು ದೇವಾಲಯಗಳ ಆಡಳಿತ ಮತ್ತು ಭಕ್ತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಿವೆ.

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ದೇವಾಲಯಗಳಿಗೆ ಒಳಪಟ್ಟಿರುವ 259 ಕಲ್ಯಾಣಿಗಳನ್ನು ಮೂರು ವರ್ಷಗಳಲ್ಲಿ ಪುನರುಜ್ಜಿವನಗೊಳಿಸಲು ‘ಜಲ ನಿಧಿ ಕಲ್ಯಾಣಿಗಳ ಪುನಃಶ್ವೇತನ ಯೋಜನೆ’ ಕೈಗೊಳ್ಳಲಾಗುತ್ತಿದೆ. ಈ ಉದ್ದೇಶಕ್ಕೆ ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು.

‘ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ’ ಮತ್ತು ‘ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ’ಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಉದ್ದೇಶಿಸಿದೆ.

ಹೊರ ರಾಜ್ಯದ ಪುಣ್ಯಕ್ಷೇತ್ರಗಳಲ್ಲಿರುವ ಕರ್ನಾಟಕ ರಾಜ್ಯದ ಛತ್ರಗಳ ನಿರ್ಮಾಣ ಮತ್ತು ಅಭಿವೃದ್ಧಿಪಡಿಸಲು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗುವುದು.

ವಾರಣಾಸಿಯಲ್ಲಿ ಪ್ರಸ್ತುತ ಇರುವ ಛತ್ರವು ಶಿಥಿಲಗೊಂಡಿರುವುರಿಂದ ಹೊಸ ರಾಜ್ಯ ಛತ್ರವನ್ನು ನಿರ್ಮಿಸಲಾಗುವುದು. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ ಜಾಗದಲ್ಲಿ ಪ್ರಸ್ತುತ ಇರುವ ಛತ್ರವು ಶಿಥಿಲಗೊಂಡಿದ್ದು, ಇದರ ನವೀಕರಣವನ್ನು ಕೈಗೊಳ್ಳಲಾಗುವುದು.

ಶ್ರೀಶೈಲಂ ಕ್ಷೇತ್ರದಲ್ಲಿ ಹೊಸದಾಗಿ ಯಾತ್ರಿನಿವಾಸ ನಿರ್ಮಾಣ ಮಾಡಲಾಗುವುದು. ತುಳಜಾಪುರದಲ್ಲಿ ಪ್ರಸ್ತುತ ಇರುವ ಛತ್ರವನ್ನು ಹೊಸದಾಗಿ ನಿರ್ಮಾಣ ಮಾಡಲಾಗುವುದು.

ಬೆಂಗಳೂರು ನಗರದ ಹೃದಯ ಭಾಗವಾದ ಕೆಂಪೇಗೌಡ ವೃತ್ತದಲ್ಲಿ ಇಲಾಖೆಗೆ ಸೇರಿದ ಬಂಡಿಶೇಷಮ್ಮ ಛತ್ರದ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ (PPP) ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ರಾಜ್ಯದಿಂದ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಐದು ಸಾವಿರ ಕೋಟಿ ರೂಪಾಯಿಗಳ ಸಹಾಯಧನವನ್ನು ಡಿಬಿಟಿ ಮೂಲಕ ವಿತರಣೆ. ಈ ಉದ್ದೇಶಕ್ಕಾಗಿ ಐದು ಕೋಟಿ ಅನುದಾನ ಮೀಸಲು.