ಮಂಗಳೂರು: ಕರಾವಳಿ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕೇರಳ ಮಾದರಿಯ ಹೌಸ್ಬೋಟ್, ಕ್ರೂಸ್ ಪ್ರವಾಸೋದ್ಯಮ ಮತ್ತು ಮಂಗಳೂರು-ಗೋವಾ ನಡುವೆ ಕ್ರೂಸ್ ಸೇವೆ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರವಾಸೋದ್ಯಮ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಜಲ ಪ್ರವಾಸೋದ್ಯಮ ಬಲಪಡಿಸಲು ಹಲವು ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಮಂಗಳೂರು-ಗೋವಾ ನಡುವೆ ವಿವಿಧ ತಾಣಗಳಲ್ಲಿ ನಿಲುಗಡೆ ಹೊಂದಿರುವ ಕ್ರೂಸ್ ಸೇವೆ ಸದ್ಯದ ಪ್ರಸ್ತಾವನೆಯಾಗಿದ್ದು, ಸ್ಥಳೀಯ ಹಡಗುತಾಣಗಳಲ್ಲಿ ನಿರ್ಮಾಣವಾಗುತ್ತಿರುವ ಹಡಗುಗಳನ್ನು ಇದಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಇದು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ನವ ಮಂಗಳೂರು ಬಂದರಿಗೆ ಬರುವ ಅಂತಾರಾಷ್ಟ್ರೀಯ ಕ್ರೂಸ್ ಪ್ರಯಾಣಿಕರನ್ನು ಇಲ್ಲೇ ಉಳಿಸಿಕೊಂಡು, ಕರಾವಳಿ ಮತ್ತು ಮಲೆನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಉತ್ತೇಜಿಸಲು ಕೇಂದ್ರ ಬಂದರು ಸಚಿವಾಲಯ ಮತ್ತು ಬಂದರು ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಈ ಸಂಬಂಧ ರಾಜ್ಯದ ಮತ್ತಷ್ಟು ಬೀಚ್ಗಳನ್ನು ಬ್ಲೂ ಫ್ಲ್ಯಾಗ್ ಪ್ರಮಾಣೀಕರಣಕ್ಕೆ ಪ್ರಸ್ತಾಪಿಸಲಾಗುವುದು. ಸದ್ಯಕ್ಕೆ ಕರಾವಳಿಯಲ್ಲಿ ಗೋವಾ ಮಾದರಿಯ ಕ್ಯಾಸಿನೊಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರವಾಸೋದ್ಯಮ ಅಭಿವೃದ್ದಿಯ ಮೂಲ ಉದ್ದೇಶ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆ ಹೆಚ್ಚಿಸುವುದಾಗಿದೆ ಎಂದರು.
ಕರಾವಳಿ ನಿಯಂತ್ರಣ ವಲಯ (CRZ) ನಿರ್ಬಂಧಗಳಿಂದ ರಸ್ತೆ ಅಭಿವೃದ್ಧಿಗಿರುವ ತೊಡಕು ನಿವಾರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜೊತೆಗೆ ಇದೀಗ ಇರುವ ಹೋಂಸ್ಟೇಗಳಿಗೆ ತಮ್ಮ ನಿವಾಸದಲ್ಲಿ 6 ಕೊಠಡಿಗಳವರೆಗೆ ಪ್ರವಾಸಿಗರಿಗೆ ಅವಕಾಶ ನೀಡಲು ಅನುಮತಿಸಲಾಗುವುದು. ಇನ್ನು ದೊಡ್ಡ ಪ್ರಮಾಣದಲ್ಲಿ ಲಾಡ್ಜ್/ಹೋಟೆಲ್ ರೀತಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಹೋಟೆಲ್ ಲೈಸೆನ್ಸ್ ಪಡೆಯಬೇಕು ಎಂದರು.
ಈ ಎಲ್ಲಾ ಪ್ರಸ್ತಾವನೆಗಳನ್ನು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.

