ಮಂಗಳೂರು: ಬೆಂದೂರ್‌ವೆಲ್‌ನಲ್ಲಿ ಅಮರನಾಥ ಶೆಟ್ಟಿ ಅವರ ವ್ಯವಸ್ಥಾಪಕ ನಿರ್ದೇಶನದ ಬೆಳಿಯೂರು ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

ನವೆಂಬರ್ 7, 2026ರ ಶನಿವಾರ ಬೆಳಿಗ್ಗೆ 9:30ಕ್ಕೆ ಬೆಂದೂರ್‌ವೆಲ್‌ನ ಲೆಗಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ, ಡೊಮಿನೋಸ್ ಪಿಜ್ಜಾ ಮಳಿಗೆಯ ಮೇಲ್ಭಾಗದಲ್ಲಿರುವ ನೂತನ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್‌ನ ಮಂಗಳೂರು–ಮಣಿಪಾಲ ಕೇಂದ್ರದ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಕಾರ್ಯದರ್ಶಿಗಳಾದ ಸುಪ್ರೀತ್ ಆಳ್ವ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕರಾದ ಪ್ರವೀಣಚಂದ್ರ ಆಳ್ವ, ವಕೀಲರು ಹಾಗೂ ನೋಟರಿಯಾದ ಉಮೇಶ್ ಶೆಟ್ಟಿ ಎಸ್. ಮೂಡುಶೆಡ್ಡೆ, ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ನಿತಿನ್ ಗೊನ್ಸಾಲ್ವೆಸ್, ಸಂಸ್ಥೆಯ ನಿರ್ದೇಶಕರಾದ ನಮಿತಾ ಎ. ಶೆಟ್ಟಿ ಹಾಗೂ ಶ್ರೀನಾಥ್ ಉಪಸ್ಥಿತರಿದ್ದರು.

ಗಣ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿದರು. ಸುಪ್ರೀತ್ ಆಳ್ವ ಅವರು ಸಂಸ್ಥೆಯ ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗಣ್ಯರು ಸಂಸ್ಥೆಯ ಮುಂದಿನ ಅಭಿವೃದ್ಧಿ ಹಾಗೂ ಯಶಸ್ಸಿಗೆ ಶುಭಕೋರಿದರು. ಹೊಸ ಕನಸು ಹಾಗೂ ಉದ್ಯಮದ ಬೆಳವಣಿಗೆಯ ಆಶಯದೊಂದಿಗೆ ಆರಂಭಗೊಂಡಿರುವ ಬೆಳಿಯೂರು ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂಬ ಹಾರೈಕೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.