ಸುಳ್ಯ: ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಗರ್ಭಿಣಿ ಯುವತಿಯೊಬ್ಬಳನ್ನು ಬಿಸಿಲೆ ಘಾಟಿಗೆ ಕರೆದೊಯ್ದು ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಘಟನೆ ನವೆಂಬರ್ 4ರ ರಾತ್ರಿ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್ ನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಯಿಂದ ಪ್ರಜ್ಞೆ ತಪ್ಪಿ ಬಿದ್ದ ಯುವತಿಯನ್ನು ಮೃತಪಟ್ಟಿದ್ದಾಳೆಂದು ಭಾವಿಸಿದ ಯುವಕ, ಆಕೆಯನ್ನು ಘಾಟಿಯ ರಸ್ತೆ ಬದಿಯ ಚರಂಡಿಗೆ ಎಸೆದು ತೆರಳಿದ್ದು, ರಾತ್ರಿಯಿಡೀ ಕಾಡಿನ ನಡುವೆ ಕಳೆದ ಯುವತಿ ಬೆಳಗ್ಗೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಕಡಬ ತಾಲೂಕಿನ ಕೊಣಾಜೆ ಗ್ರಾಮದ ಯುವಕ ಪ್ರಸಾದ್ ಹಾಗೂ ಕೊಂಬಾರು ಗ್ರಾಮದ ಯುವತಿ ಕಳೆದ 3 ವರ್ಷಗಳಿಂದ ಪರಿಚಯ ಹೊಂದಿದ್ದರು.

ಸ್ನೇಹದ ಬಳಿಕ ಪ್ರೇಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ನವೆಂಬರ್ 4ರಂದು ಸಂಜೆ ಯುವಕ ಉಪ್ಪಿನಂಗಡಿಯಿಂದ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟಿ ತಲುಪಿದ್ದಾನೆ. ಅಲ್ಲಿ ರಾತ್ರಿ ವೇಳೆ ಕೊಲೆ ಮಾಡುವ ಉದ್ದೇಶದಿಂದ ರಾಡ್‌ನಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯ ತೀವ್ರತೆಗೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿದ ಯುವಕ ಚರಂಡಿಗೆ ಎಸೆದು ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ. ಕಾಡಿನ ನಡುವೆ ಚರಂಡಿಯಲ್ಲಿ ರಾತ್ರಿ ಕಳೆದ ಯುವತಿಗೆ ನವೆಂಬರ್ 5ರಂದು ಬೆಳಗ್ಗೆ ಪ್ರಜ್ಞೆ ಮರಳಿದೆ. ಬಳಿಕ ಅಲ್ಲಿಂದ ಬಸ್ ಮೂಲಕ ಸುಬ್ರಹ್ಮಣ್ಯಕ್ಕೆ ಆಗಮಿಸಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಯುವತಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೃತ್ಯ ನಡೆದ ಸ್ಥಳ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಯಸಳೂರು ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣದ ಆರೋಪಿ ಪ್ರಸಾದ್ ನನ್ನು ನವೆಂಬರ್ 5ರಂದು ಸುಬ್ರಹ್ಮಣ್ಯದ ವಸತಿಗೃಹವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಯಸಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಗೆ ಬೇರೆಡೆ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಯುವತಿ ಕೂಡ ಸುಬ್ರಹ್ಮಣ್ಯದಲ್ಲಿ ಖಾಸಗಿ ಉದ್ಯೋಗದಲ್ಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ.