ಮಂಗಳೂರು: ಯಾವುದೇ ಮುನ್ಸೂಚನೆ ನೀಡದೆ HPCL ಸಂಸ್ಥೆಯ ಕೆಲಸದಿಂದ ವಜಾಗೊಳಿಸಿರುವ ಮಹಿಳಾ ಗುತ್ತಿಗೆ ಕಾರ್ಮಿಕರು, ಕಳೆದ ಒಂದು ತಿಂಗಳು ಏಳು ದಿನಗಳಿಂದ ಕೆಲಸದ ಅವಧಿಯಲ್ಲಿ ಕಂಪನಿಯ ಗೇಟ್‌ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದಂತೆ ಮನವಿ ಪತ್ರ ಸ್ವೀಕರಿಸಲು ನಿರಾಕರಿಸಿ ದರ್ಪ ತೋರಿದ HPCL ಅಧಿಕಾರಿಗಳ ವಿರುದ್ಧ ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಸುರತ್ಕಲ್ ನಾಗರಿಕ ಹೋರಾಟ ಸಮಿತಿಯು ಕಳೆದ ಒಂದು ವಾರದಿಂದ ಮಹಿಳಾ ಕಾರ್ಮಿಕರ ಬೆಂಬಲಕ್ಕೆ ನಿಂತಿದೆ.

ಕಾರ್ಮಿಕರ ಸಮಸ್ಯೆಯನ್ನು ಏಳು ದಿನಗಳೊಳಗಾಗಿ ಬಗೆಹರಿಸಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

ಸುಮಾರು ಮೂರೂವರೆ ಗಂಟೆಗಳ ಕಾಲ ನಿರಂತರ ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಪ್ರಯತ್ನ ನಡೆದಿದ್ದು, ಬಳಿಕ ಸುರತ್ಕಲ್ ಠಾಣೆಯ ಪೊಲೀಸರು ಮಧ್ಯಪ್ರವೇಶಿಸಿದರು. ಪೊಲೀಸರ ಮಧ್ಯಸ್ಥಿಕೆಯ ನಂತರ ಕೊನೆಗೂ HPCL ಅಧಿಕಾರಿಗಳು ಕಾರ್ಮಿಕರ ಮನವಿ ಪತ್ರವನ್ನು ಸ್ವೀಕರಿಸಿದರು.