ಮಣಿಪಾಲ : ಗ್ರಾಮೀಣ ಕಲಾವಿದರು, ಯುವಜನರು ಮತ್ತು ಕರಕುಶಲಕರ್ಮಿಗಳು ರಚಿಸಿದ ಅಪರೂಪದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆಂದೇ ನಿರ್ಮಾಣವಾದ ವೇದಿಕೆ ನಮ್ಮ ಅಂಗಡಿ. ಪ್ರತೀ ವರ್ಷದಂತೆ ಈ ವರ್ಷವೂ ಆಯೋಜನೆಗೊಂಡಿದೆ, ವಿದ್ಯಾಕಾಶಿ ಮಣಿಪಾಲದ ಎಂಐಸಿ ಕ್ಯಾಂಪಸ್ ನಲ್ಲಿ ನಡೆದ ಪ್ರದರ್ಶನ ಮತ್ತು ಮಾರಾಟಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ವಿಶಿಷ್ಟವಾದ ಮಣ್ಣಿನ ಮಡಿಕೆಗಳು, ವೈವಿಧ್ಯಮಯ ಸೀರೆಗಳು ಮತ್ತು ಉಡುಪುಗಳು, ಆಭರಣಗಳು, ಮಣ್ಣಿನ ವಸ್ತುಗಳು, ಕಲಾವಿದರ ಅದ್ಭುತ ವರ್ಣಚಿತ್ರಗಳು ಕಣ್ಮನ ತಣಿಸುವಂತಿತ್ತು.ಇಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ ಈ ಕರಕುಶಲ ಉತ್ಪನ್ನಗಳನ್ನು ವಿದ್ಯಾರ್ಥಿಗಳೇ ಮಾರಾಟ ಮಾಡುತ್ತಾರೆ.

ವಿದ್ಯಾರ್ಥಿಗಳಿಗೆ ಮಾರಾಟ ಕೌಶಲದ ಪರಿಚಯವೂ ಇದರಿಂದ ಸಿಗುತ್ತದೆ.ಇದೇ ಉದ್ದೇಶ ಇಟ್ಟುಕೊಂಡು ಕಳೆದ ಬಹಳಷ್ಟು ವರ್ಷಗಳಿಂದ ನಮ್ಮ ಅಂಗಡಿ ಪ್ರದರ್ಶನ ಜನಪ್ರಿಯ ಗೊಂಡಿದೆ.ಸಾವಿರಾರು ವಿದ್ಯಾರ್ಥಿಗಳು ಭೇಟಿ ನೀಡಿ ಸ್ವತಃ ಖರೀದಿ ಮಾಡುತ್ತಾರೆ.ತಾವೇ ಮಾರಾಟ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಕೌಶಲ ಗೊತ್ತಾಗುವುದರ ಜೊತೆಗೆ ಉತ್ಪಾದಕರಿಗೂ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ.
ನಮ್ಮ ಅಂಗಡಿ ಉತ್ಸವವು ಕೇವಲ ಖರೀದಿ ಮತ್ತು ಮಾರಾಟಕ್ಕೆ ವೇದಿಕೆಯಾಗಿರದೆ ಕಲೆ, ಸಂಸ್ಕೃತಿ, ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಸಮಗ್ರ ಉತ್ಸವವಾಗಿ ವಿಕಸನಗೊಂಡಿದೆ. ಎರಡು ದಿನಗಳ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

