ಮಂಗಳೂರು: ಕಾಂಗ್ರೆಸ್ ಸರ್ಕಾರ ಸಾವಿರ ಸಂಭ್ರಮ ಅಂತ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಆದರೆ ಇವರ ಈ ಸಂಭ್ರಮ ಯಾಕೆ? ಭ್ರಷ್ಟಾಚಾರ ಮಾಡಿದಾರೆ ಅಂತ ಸಂಭ್ರಮವಾ?. 60% ಭ್ರಷ್ಟಾಚಾರ, ನಾಗೇಂದ್ರ, ವೀರೇಂದ್ರ ಪಪ್ಪಿ, ಸತೀಶ್ ಸೈಲ್ ಜೈಲಿಗೆ ಹೋದ ಕಾರಣಕ್ಕೆ ಸಂಭ್ರಮನಾ?. ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣಕ್ಕೆ, ಡ್ರಗ್ ಮಾಫಿಯಾ ಕಾರಣಕ್ಕೆ ಸಂಭ್ರಮವಾ?, ಗುತ್ತಿಗೆದಾರರ ಬಿಲ್ ಬಾಕಿ ಇಟ್ಟು ಆತ್ಮಹತ್ಯೆ ಹಂತಕ್ಕೆ ದೂಡಿದ್ದಕ್ಕೆ ಸಂಭ್ರಮವಾ?.ಗೃಹಲಕ್ಷ್ಮಿ ಹಣ ದುರುಪಯೋಗ, ಅಭಿವೃದ್ಧಿ ಶೂನ್ಯ, ಅಬಕಾರಿ ಹಗರಣಕ್ಕೆ ಸಂಭ್ರಮವಾ?, ಪ್ರತೀನಿತ್ಯ ಈ ಸರ್ಕಾರದ ವಿರುದ್ದ ನೆಗೆಟಿವ್ ಸುದ್ದಿ ಬರ್ತಾ ಇದೆ, ನಿಮ್ಮ ಸಂಭ್ರಮಕ್ಕೆ ಯಾವ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಮೇಲೆಯೇ ಮೂಡಾ ಆರೋಪ ಬಂತು. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ನೆನಪಿಡೋ ಕೆಲಸ ಏನು ಮಾಡಿದ್ದೀರಿ?. ಜನರ ಸಂಕಷ್ಟದಲ್ಲಿ ನೀವು ಸಂಭ್ರಮಿಸೋದು ವಿಕೃತಿಯ ಪರಮಾವಧಿ. ಬಿಜೆಪಿ ಸರ್ಕಾರದ ಇದ್ದಾಗ 40% ಆರೋಪ ಮಾಡಿದ್ರೂ ಆಯೋಗ ಆರೋಪದಲ್ಲಿ ಹುರುಳಿಲ್ಲ ಎಂದಿತು. ಬೈರತಿ ಬಸವರಾಜ್ ಪ್ರಕರಣ ರಾಜಕೀಯ ಪ್ರೇರಿತ, ಅವರ ವಿರುದ್ಧ ಯಾವುದೇ ಸಾಕ್ಷಿ ಇಲ್ಲ. ಪ್ರಯಾಗ್ ರಾಜ್ ನಲ್ಲಿ ಜೊತೆಗೆ ಫೋಟೋ ತೆಗೆಸಿಕೊಂಡ ಕಾರಣಕ್ಕೆ ಆರೋಪ ಮಾಡಲಾಗಿದೆ ಎಂದರು.

ಭೈರತಿ ವಿರುದ್ದ ಯಾವುದೇ ಸಾಕ್ಷಿ ಕೊಡಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲ. ಯಾಕೆಂದರೆ ಅವರನ್ನು ಈ ಆರೋಪದಲ್ಲಿ ಫಿಕ್ಸ್ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿಲ್ಲ ಅಷ್ಟೇ, ಆದರೆ ಅಪರಾಧಿ ಎಂದಿಲ್ಲ. ಬಿಜೆಪಿ ಹಾಗೂ ಬಿಜೆಪಿ ಶಾಸಕರ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಯತ್ನಾಳ್ ನಮ್ಮ ಶಾಸಕರು ಅಲ್ಲ, ಅವರು ಬಿಜೆಪಿ ಉಚ್ಛಾಟಿತ ಶಾಸಕ. ಹಾಗಾಗಿ ಅವರ ಆರೋಪಗಳ ಬಗ್ಗೆ ಮಾತನಾಡಲು ಆಗಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕಾಳಗ ವಿಚಾರವಾಗಿ ಈ ಸರ್ಕಾರಕ್ಕೆ 136 ಸೀಟ್ ರಾಜ್ಯದ ಜನ ಕೊಟ್ಟಿದ್ದಾರೆ. ಯಾರು ಮುಖ್ಯಮಂತ್ರಿ ಅನ್ನೋದು ಜನರ ಸಮಸ್ಯೆ ಅಲ್ಲ. ಅಭಿವೃದ್ಧಿ, ಭ್ರಷ್ಟಾಚಾರ ಕಡಿವಾಣ ಇದೆಲ್ಲಾ ಜನರು ಕೇಳ್ತಾ ಇರೋದು. ಬಜೆಟ್ ಗೂ ಮೊದಲು ಕುರ್ಚಿಯ ಸಮಸ್ಯೆ ಪರಿಹರಿಸಿಕೊಳ್ಳಿ. ಇದರಿಂದ ಆಡಳಿತದ ಬಿಗಿ ತಪ್ಪಿದೆ, ಭ್ರಷ್ಟಾಚಾರ ಸ್ಪರ್ಧೆ ಉಂಟಾಗಿದೆ. ಹೈಕಮಾಂಡ್ ಎರಡೂ ಕಡೆ ಗೊಂಬೆಯಾಟ ಆಡಿ ಮ್ಯಾನೆಜ್ ಮಾಡ್ತಾ ಇದೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಂದಲೂ ಕಪ್ಪ ಸಂಗ್ರಹ ಮಾಡ್ತಾ ಇದ್ದಾರೆ ಎಂದು ಮಂಗಳೂರಿನಲ್ಲಿ ಸಿ ಟಿ ರವಿ ವಾಗ್ದಾಳಿ ನಡೆಸಿದರು.