ಬೀದರ್ : ಲೋಟಸ್ ಸ್ಪಾ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ ಜಿಲ್ಲಾ ಪೊಲೀಸರು ವಿವಿಧ ರಾಜ್ಯದ ಐವರು ಯುವತಿಯರನ್ನು ರಕ್ಷಣೆ ಮಾಡಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಗರದ ಶಿವನಗರ್ ಟ್ರಾಫಿಕ್ ಸಿಗ್ನಲ್ ಬಳಿ ಇರುವ ಲೋಟಸ್ ಸ್ಪಾದಲ್ಲಿ ವೇಶ್ಯವಾಟಿಕೆ ದಂಧೆ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಎಸ್ಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಸೇನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಎಸ್.ಎನ್ ಸನದಿ ಅವರ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ್, ಸೆನ್ ಪೊಲೀಸ್ ಠಾಣೆ, ನೂತನ ನಗರ ಪೊಲೀಸ್ ಠಾಣೆ ಮತ್ತು ವಿಶೇಷ ಘಟಕದ ಸಿಬ್ಬಂದಿ ಭಾಗವಹಿಸಿದ್ದರು. ಈ ವೇಳೆ ಮಹಾರಾಷ್ಟ್ರದ ಇಬ್ಬರು, ಅಸ್ಸಾಂನ ಒಬ್ಬರು, ಹರ್ಯಾಣದ ಒಬ್ಬರು ಹಾಗೂ ಮಧ್ಯಪ್ರದೇಶದ ಒಬ್ಬರು ಸೇರಿ ಒಟ್ಟು ಐವರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸ್ಪಾ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿರುವ ಇಬ್ಬರನ್ನು ಬಂಧಿಸಿ ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

