ಮಂಗಳೂರು: ಕೀಲಾಯ್ಡ್ ಹಾಗೂ ಇತರ ಸಮಸ್ಯಾತ್ಮಕ ಕಲೆಗಳಿಂದ ಬಳಲುತ್ತಿರುವವರಿಗೆ ವಿಶೇಷ ಮತ್ತು ಸುಧಾರಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ‘ಸಮಗ್ರ ಕೀಲಾಯ್ಡ್ ಕ್ಲಿನಿಕ್’ ಆರಂಭಿಸಲಾಗಿದೆ.
ಕೀಲಾಯ್ಡ್ ಎಂದರೆ ಚರ್ಮದ ಮೇಲೆ ಉಬ್ಬಿಕೊಂಡಿರುವ ದಪ್ಪನೆಯ ಕಲೆ. ಗಾಯ ವಾಸಿಯಾಗುವಾಗ ಉಂಟಾಗುವ ಕಲೆಯ ಅಂಗಾಂಶವು ಮೂಲ ಗಾಯದ ಅಂಚನ್ನು ಮೀರಿ ಬೆಳೆದಾಗ ಕೀಲಾಯ್ಡ್ ಉಂಟಾಗುತ್ತದೆ. ಗಾಯ, ಶಸ್ತ್ರಚಿಕಿತ್ಸೆ, ಮೊಡವೆ ಅಥವಾ ಚರ್ಮಕ್ಕೆ ಆದ ಸಣ್ಣ ಗಾಯ ಅಥವಾ ಸುಟ್ಟ ಗಾಯದ ನಂತರವೂ ಇದು ಕಾಣಿಸಿಕೊಳ್ಳಬಹುದು. ಇದು ಕೇವಲ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಕೀಲಾಯ್ಡ್ನಿಂದ ತುರಿಕೆ, ನೋವು ಮತ್ತು ಕಿರಿಕಿರಿ ಉಂಟಾಗಿ, ವ್ಯಕ್ತಿಯ ದೈನಂದಿನ ಜೀವನ ಹಾಗೂ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು.
ಈ ಹೊಸ ಕ್ಲಿನಿಕ್ನಲ್ಲಿ ಪ್ಲಾಸ್ಟಿಕ್ ಮತ್ತು ಪುನರ್ರಚನಾ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ರೇಡಿಯೇಷನ್ ಥೆರಪಿ ವಿಭಾಗದ ವೈದ್ಯರು ಒಂದೇ ತಂಡವಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸಿ, ಅವರ ಸ್ಥಿತಿಗೆ ತಕ್ಕಂತೆ ಚಿಕಿತ್ಸಾ ಯೋಜನೆಯನ್ನು ರೂಪಿಸಲಾಗುತ್ತದೆ.
ಈ ಕ್ಲಿನಿಕ್ನ ಪ್ರಮುಖ ಅನುಕೂಲವೆಂದರೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಥವಾ ರಾತ್ರಿ ಉಳಿದುಕೊಳ್ಳುವ ಅಗತ್ಯವಿರುವುದಿಲ್ಲ. ವೈದ್ಯರ ಸಲಹೆಯಂತೆ, ಅವರು ಚಿಕಿತ್ಸೆ ಪಡೆದು ಅದೇ ದಿನ ಮನೆಗೆ ಮರಳಬಹುದು. ಸಮಗ್ರ ಕೀಲಾಯ್ಡ್ ಕ್ಲಿನಿಕ್ ಪ್ರತಿ ಬುಧವಾರ ಮತ್ತು ಶನಿವಾರ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದೆ.
ಶಸ್ತ್ರಚಿಕಿತ್ಸೆ ಮತ್ತು ರೇಡಿಯೇಷನ್ ಥೆರಪಿಯನ್ನು ಒಂದೇ ಸೂರಿನಡಿ ತಂದು, ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ತಕ್ಕ ಚಿಕಿತ್ಸೆ ನೀಡುವ ಮೂಲಕ ಕೀಲಾಯ್ಡ್ಗೆ ವಿಶೇಷ ಚಿಕಿತ್ಸೆಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಕ್ಲಿನಿಕ್ನ ಉದ್ದೇಶವಾಗಿದೆ.
ಹೊಸ ಸೌಲಭ್ಯದ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆ, ಅತ್ತಾವರದ ವೈದ್ಯಕೀಯ ಅಧೀಕ್ಷಕರಾದ ಡಾ. ಚಕ್ರಪಾಣಿ ಎಂ. ಅವರು, “ಸುಧಾರಿತ, ತಂಡ ಆಧಾರಿತ ಹಾಗೂ ರೋಗಿಸ್ನೇಹಿ ಆರೋಗ್ಯ ಸೇವೆ ನೀಡುವಲ್ಲಿ ಆಸ್ಪತ್ರೆಯ ನಿರಂತರ ಬದ್ಧತೆಗೆ ಸಮಗ್ರ ಕೀಲಾಯ್ಡ್ ಕ್ಲಿನಿಕ್ ಸಾಕ್ಷಿಯಾಗಿದೆ ಎಂದು ಹೇಳಿದರು. ತಜ್ಞ ವೈದ್ಯರ ಸಂಘಟಿತ ಕಾರ್ಯ ಮತ್ತು ಅನುಕೂಲಕರ ಚಿಕಿತ್ಸಾ ಸೌಲಭ್ಯಗಳ ಮೂಲಕ ವಿಶೇಷ ಚಿಕಿತ್ಸೆ ಜನರಿಗೆ ಸುಲಭವಾಗಿ ತಲುಪುವುದು ಮುಖ್ಯ” ಎಂದು ಅವರು ಅಭಿಪ್ರಾಯಪಟ್ಟರು.

