ಮಂಗಳೂರು: ಸಂಗೀತ ಭಾರತಿ ಫೌಂಡೇಶನ್ (ರಿ) ಸಂಸ್ಥೆಯ ಆಶ್ರಯದಲ್ಲಿ ‘ಸ್ತ್ರೀ’ ಪರಿಕಲ್ಪನೆಯ ವಿನೂತನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಫೆ.22ರಂದು ಸಂಜೆ 5 ಗಂಟೆಗೆ ನಗರದ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಗೀತ ಭಾರತಿ ಫೌಂಡೇಶನ್‌ನ ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್.ನಾಯಕ್ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ಕೃಷ್ಟ ಮಟ್ಟದ ಶಾಸ್ತ್ರೀಯ ಗಾಯನ ಜುಗಲ್‌ಬಂಧಿ ‘ ಮತ್ತು ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮಗಳು ನಡೆಯಲಿದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ.ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ ಎಂದು ಮಾಹಿತಿ ನೀಡಿದರು.

ಪೂರ್ವಾರ್ಧದಲ್ಲಿ ಯಲ್ಲಾಪುರದ ವಿಭಾ ಹೆಗ್ಡೆ ಮತ್ತು ಬೆಂಗಳೂರಿನ ಶಿವಾನಿ ಮಿರಾಜ್ಯರ್ ಇವರಿಂದ ಶಾಸ್ತ್ರೀಯ ಗಾಯನ ‘ಜುಗಲ್ ಬಂಧಿ’ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಮೇಧಾ ಜಿ ಭಟ್‌ ಮತ್ತು ಭೋಪಾಲ್‌ನ ವಿಜೇತಾ ಹೆಗ್ಡೆ ಅವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ ಎಂದು ಹೇಳಿದರು.

ಉತ್ತಾರಾರ್ಧದಲ್ಲಿ ಮುಂಬೈನ ಡಾ.ಸಂಗೀತ ಶಂಕರ್, ರಾಗಿಣಿ ಶಂಕರ್ ಮತ್ತು ನಂದಿನಿ ಶಂಕರ್ ಅವರಿಂದ ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬ್ಲಾದಲ್ಲಿ ಮುಂಬೈನ ಅನುರಾಧ ಪಾಲ್ ಅವರು ಸಾಥ್ ನೀಡಲಿದ್ದಾರೆ. ‘ಸ್ತ್ರೀ’ ಕಾರ್ಯಕ್ರಮಕ್ಕೆ ನಗರದ ಪ್ರಖ್ಯಾತ ಸಂಗೀತಾ ಗುರುಗಳಾದ ಬಸ್ತಿ ಕವಿತಾ ಶೆಣೈ, ವಿಭಾ ನಾಯಕ್ ಹಾಗೂ ಶ್ರೀಲತಾ ಪ್ರಭು ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಗೀತ ಭಾರತಿ ಫೌಂಡೇಶನ್‌ನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಟ್ರಸ್ಟಿಗಳಾದ ಮುರಳೀಧರ ಜಿ. ಪೈ ಡಾ.ರಮೇಶ್ ಕೆ.ಜಿ, ಉಜ್ವಲ್ ಪ್ರದೀಪ್, ಶ್ವೇತಾ ಸುವರ್ಣ ಉಪಸ್ಥಿತರಿದ್ದರು.